ಬೆಂಗಳೂರು: ಮುಸ್ಲಿಮ್ ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿ ಭಾಷಣ ಮಾಡಿ, ಮುಸ್ಲಿಮರ ಭಾವನೆಗಳಿಗೆ ಧಕ್ಕೆ ತಂದ ಹಾಗೂ ಹಿಂದೂ-ಮುಸ್ಲಿಮರ ನಡುವೆ ಬಿರುಕು ಮೂಡಿಸಲು ಪ್ರಯತ್ನಿಸಿದ ಆರೋಪದಲ್ಲಿ ಮೈಸೂರಿನ ಕಾಳಿಮಠದ ಋಷಿಕುಮಾರ ಸ್ವಾಮಿಯ ವಿರುದ್ಧ ಚಿಂತಾಮಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಐಪಿಸಿ ಸೆಕ್ಷನ್ 295 (ಎ)ಯಡಿ ಜಾಮೀನುರಹಿತ ಪ್ರಕರಣ ದಾಖಲಾಗಿದೆ. ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕಿನ ಗಾಂಧಿ ನಗರ ನಿವಾಸಿ ಎಸ್.ಮುನವ್ವರ್ ಈ ಸಂಬಂಧ ಠಾಣೆಗೆ ದೂರು ನೀಡಿದ್ದರು. ಫೆಬ್ರವರಿ 28ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಚಿಂತಾಮಣಿ ತಾಲೂಕು ಕಚೇರಿ ಮುಂಭಾಗ ಕೇಸರಿ ಬಾವುಟ ಹಿಡಿದುಕೊಂಡು ಹಲವರು ನಿಂತಿದ್ದು, ಅಲ್ಲಿ ಋಷಿಕುಮಾರ ಸ್ವಾಮೀಜಿ ಭಾಷಣ ಮಾಡುತ್ತಿದ್ದರು. ನಾನು ಕೂಡ ಭಾಷಣ ಆಲಿಸಿದೆ. ಸ್ವಾಮೀಜಿಯವರು ಭಾಷಣದುದ್ದಕ್ಕೂ ಮುಸ್ಲಿಮರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರು. ಮಾತ್ರವಲ್ಲ ಮುಸ್ಲಿಮರೊಂದಿಗೆ ವ್ಯಾಪಾರ ವಹಿವಾಟು ನಡೆಸಬಾರದು ಎಂದು ಅಲ್ಲಿ ಸೇರಿದ್ದ ಸಂಘಪರಿವಾರದ ಕಾರ್ಯಕರ್ತರಿಂದ ಪ್ರಮಾಣ ಮಾಡಿಸಿದರು.
ಮುಸ್ಲಿಮರ ಬಗ್ಗೆ ದ್ವೇಷ ಮೂಡುವ ರೀತಿಯಲ್ಲಿ ಅವರು ಭಾಷಣ ಮಾಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಹೆಣ್ಣು ಮಕ್ಕಳ ವಿಚಾರದಲ್ಲಿಯೂ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಆದ್ದರಿಂದ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ದೂರಿನಲ್ಲಿ ಮುನವ್ವರ್ ಒತ್ತಾಯಿಸಿದ್ದರು. ದೂರು ಸ್ವೀಕರಿಸಿದ ಚಿಂತಾಮಣಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.