►“ಪ್ರಸ್ತುತ” ನ್ಯೂಸ್ ಸಂಪಾದಕ ಸೇರಿ ಸಾಧಕ ಪತ್ರಕರ್ತರಿಗೆ ಸನ್ಮಾನ
ಬೆಂಗಳೂರು: ಡಿಜಿಟಲ್ ವಲಯದ ಸಂಘಟನೆ ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಅಸ್ತಿತ್ವಕ್ಕೆ ಬಂದಿದ್ದು, ಸಂಘಟನೆಯ ಲಾಂಛನವನ್ನು ಬಿಡುಗಡೆ ಮಾಡಲಾಯಿತು.
ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಚಿತ್ರನಟ, ಸಂಗೀತ ನಿರ್ದೇಶಕ ವಿ. ಮನೋಹರ್, ವಿಜಯ ಕರ್ನಾಟಕ ಆನ್ ಲೈನ್ ಎಡಿಟರ್ ಪ್ರಸಾದ್ ನಾಯಕ್, ಡಿ.ಎಕ್ಸ್, ಮ್ಯಾಕ್ಸ್ ಮುಖ್ಯಸ್ಥ ಎಸ್.ಪಿ. ದಯಾನಂದ್, ಚಿತ್ರನಟ ಡಿಂಗ್ರಿ ನಾಗರಾಜ್ ಮತ್ತಿತರರು ಲಾಂಛನವನ್ನು ಅನಾವರಣ ಮಾಡಿದರು.
ಕಾರ್ಯಕ್ರಮದಲ್ಲಿ ಪ್ರಸ್ತುತ ನ್ಯೂಸ್ ಸಂಪಾದಕ ಅಬ್ದುಲ್ ಹಮೀದ್ ಸೇರಿದಂತೆ 20 ಮಂದಿ ಪತ್ರಕರ್ತರಿಗೆ “ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾ ಪುರಸ್ಕಾರ” ನೀಡಿ ಗೌರವಿಸಲಾಯಿತು.
ಡಿಜಿಟಲ್ ಮಾಧ್ಯಮ ಕುರಿತು ಮಾತನಾಡಿದ ಪ್ರಸಾದ್ ನಾಯಕ್, ಆಧುನಿಕ ಮಾಧ್ಯಮ ಯುಗದಲ್ಲಿ ಡಿಜಿಟಲ್ ಮೀಡಿಯಾ ಸಂಘಟನೆ ಅಗತ್ಯವಿದ್ದು, ಡಿಜಿಟಲ್ ವಲಯದಲ್ಲಿ ಇದು ಮಹತ್ವದ ಬೆಳವಣಿಗೆಯಾಗಿದೆ. ಮುಂದಿನ ದಿನಗಳಲ್ಲಿ ಡಿಜಿಟಲ್ ಮಾಧ್ಯಮಕ್ಕೆ ಸೂಕ್ತ ಮಾನ್ಯತೆ ದೊರಕಿಸಿಕೊಡಲು ಸಂಘಟನೆ ಪ್ರಯತ್ನಿಸಬೇಕು. ಎರಡು ದಶಕಗಳ ಹಿಂದೆ ಡಿಜಿಟಲ್ ಮೀಡಿಯಾ ನೀರಿನ ಮೇಲಿನ ಗುಳ್ಳೆಯಂತಿತ್ತು. ಆದರೆ ಈಗ ಡಿಜಿಟಲ್ ಮೀಡಿಯಾ ಪತ್ರಕರ್ತರ ಭವಿಷ್ಯ ರೂಪಿಸುವಲ್ಲಿ ಮುಂಚೂಣಿಯಲ್ಲಿದೆ ಎಂದರು.
ಯುನಿಕೋಡ್ ಬಂದ ನಂತರ ಡಿಜಿಟಲ್ ಮೀಡಿಯಾದಲ್ಲಿ ಕ್ರಾಂತಿಯಾಯಿತು. ಏಕೆಂದರೆ ಯುನಿಕೋಡ್ ಅಕ್ಷರಗಳನ್ನು ಕಂಪ್ಯೂಟರ್ ನಲ್ಲಷ್ಟೇ ಅಲ್ಲದೆ ಮೊಬೈಲ್’ನಲ್ಲೂ ಸಹ ಓದಲು ಸಹಕಾರಿಯಾಯಿತು. ಅಸಂಘಟಿತರಾಗಿರುವ ಡಿಜಿಟಲ್ ಮೀಡಿಯಾಗೆ ಒಂದು ವೇದಿಕೆ ಒದಗಿಸಿ ಮಾನ್ಯತೆ ದೊರೆಯಲು ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಹುಟ್ಟುಹಾಕಿದ ಪತ್ರಕರ್ತ ಗಂಡಸಿ ಸದಾನಂದ ಸ್ವಾಮಿ ಅವರ ಪ್ರಯತ್ನ ಶ್ಲಾಘನೀಯ ಎಂದು ಹೇಳಿದರು.
ಪ್ರಸ್ತುತ ನ್ಯೂಸ್ ಪ್ರಧಾನ ಸಂಪಾದಕ ಅಬ್ದುಲ್ ಹಮೀದ್, ವಿಜಯ ಕರ್ನಾಟಕ ಆನ್ಲೈನ್ ಎಡಿಟರ್ ಪ್ರಸಾದ್ ನಾಯಕ್, ವಿಶ್ವವಾಣಿ ಮುಖ್ಯ ವರದಿಗಾರ ಶಿವಕುಮಾರ್ ಬೆಳ್ಳಿತಟ್ಟೆ, ಪತ್ರಕರ್ತ, ನಿರೂಪಕ ನಂಜುಂಡಪ್ಪ.ವಿ, ಡೆಕ್ಕನ್ ಹೆರಾಲ್ಡ್ ವಿಶೇಷ ಬಾತ್ಮೀದಾರ ಎನ್.ಬಿ. ಹೊಂಬಾಳ್, ವಿಜಯ ವಾಣಿ ಬೆಂಗಳೂರು ವಿಭಾಗದ ಉಪಮುಖ್ಯ ವರದಿಗಾರ ತುಳಸೀ ಕುಮಾರ್, ವಿಸ್ತಾರ ಮಾಧ್ಯಮ ಪೊಲಿಟಿಕಲ್ ಬ್ಯೂರೋ ಮುಖ್ಯಸ್ಥ ಮಾರುತಿ ಪಾವಗಡ, ಹಿರಿಯ ಪತ್ರಕರ್ತ ಎಸ್.ಎಸ್. ರೆಡ್ಡಿ, ಜೀ ನ್ಯೂಸ್, ಹಿರಿಯ ವರದಿಗಾರ ರಾಚಪ್ಪ ಸುತ್ತೂರು, ಈ ನಾಡು ಕರ್ನಾಟಕ ಬ್ಯೂರೋ ಮುಖ್ಯಸ್ಥ ಕೆ.ಮುಕುಂದ, ಟಿ.ವಿ. 5 ಸೀನಿಯರ್ ರಿಪೋರ್ಟರ್ ಶಿವು ಜೊನ್ನಳ್ಳಿ, ಎಡಿಟರ್, ಸಂಜೆ ಎಕ್ಸ್ ಪ್ರೆಸ್. ಬೆಂಗಳೂರು ಎಕ್ಸ್ ಪ್ರೆಸ್ ಸಂಪಾದಕ ಚಂದ್ರಶೇಖರ್.ಜಿ. ಬೆಂಗಳೂರು ಮಿರರ್ ವಿಶೇಷ ಬಾತ್ಮೀದಾರ ವೈ. ಮಹೇಶ್ವರ ರೆಡ್ಡಿ, ವಿ4 ನ್ಯೂಸ್ ನ ಪ್ರಧಾನ ಸಂಪಾದಕ ತಾರಾನಾಥ್, ಪ್ರಜಾನುಡಿ ಹಿರಿಯ ವರದಿಗಾರ ವೀರಭದ್ರಪ್ಪ, ಉದಯ ಕಾಲ ಮುಖ್ಯ ವರದಿಗಾರ ವಾದಿರಾಜು. ಬಿ. ವಾರ್ತಾ ಭಾರತಿ ಹಿರಿಯ ವರದಿಗಾರ ಸಮೀರ್ ಮತ್ತಿತರರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.