ತಮಿಳುನಾಡು: ಸಿನೆಮಾ ನಟರಲ್ಲಿ ಹಲವರು ತಾವು ಗಳಿಸಿದ ಹಣದ ಒಂದು ಪಾಲನ್ನು ಅರ್ಹರಿಗೆ ದಾನ ಮಾಡುವ ಗುಣ ಬೆಳೆಸಿಕೊಂಡಿದ್ದಾರೆ. ಕನ್ನಡದ ನಟ ಪುನೀತ್ ರಾಜ್ ಕುಮಾರ್ ಸಾವಿನ ಬಳಿಕ ಅವರು ದಾನ ಮಾಡ್ತಿದ್ದ ವಿವರಗಳು ಹೊರಬರುತ್ತಿದೆ. ಇದೀಗ ತಮಿಳು ಸುಪರ್ ಸ್ಟಾರ್ ಸೂರ್ಯ ಇರುಳ ಬುಡಕಟ್ಟು ಸಮುದಾಯದ ಅವೃದ್ಧಿಗಾಗಿ ಒಂದು ಕೋಟಿ ರೂಪಾಯಿ ನೀಡಿದ್ದಾರೆ.
ಇರುಳ ಬುಡಕಟ್ಟು ಜನಾಂಗದ ಕಲ್ಯಾಣಕ್ಕೆಂದು ₹ 1 ಕೋಟಿ ಮೊತ್ತದ ಚೆಕ್ಅನ್ನು ಸೂರ್ಯ ಹಾಗೂ ಜ್ಯೋತಿಕಾ ಮುಖ್ಯಮಂತ್ರಿ ಸ್ಟಾಲಿನ್ ಅವರರಿಗೆ ಹಸ್ತಾಂತರಿಸಿದ್ಧಾರೆ. ಸೂರ್ಯ ನಟನೆಯ ‘ಜೈ ಭೀಮ್’ ತಮಿಳು ಚಿತ್ರ ಇಂದು ಆಮೆಜಾನ್ ಪ್ರೈಮ್ ಒಟಿಟಿ ಮುಖಾಂತರ ಬಿಡುಗಡೆಗೊಂಡಿದೆ. ಚಿತ್ರವು ಕಾಲ್ಪನಿಕವಲ್ಲ, ಬದಲಾಗಿ ಇರುಳ ಬುಡಕಟ್ಟು ಸಮುದಾಯಕ್ಕೆ ಸಂಬಂಧಪಟ್ಟ ಸತ್ಯಘಟನೆಯನ್ನಾಧರಿಸಿದೆ. ಚಿತ್ರದ ಬಿಡುಗಡೆಗೂ ಮುನ್ನಾದಿನ ನಟ ಸೂರ್ಯ ಹಾಗೂ ಅವರ ಪತ್ನಿ ಜ್ಯೋತಿಕಾ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರನ್ನು ಭೇಟಿಯಾಗಿದ್ದರು. ಆ ಸಂದರ್ಭದಲ್ಲಿ ಈ ಹಣದ ಚೆಕ್ ಅನ್ನು ನೀಡಿದ್ದಾರೆ. ಪಳಂಕುಡಿ ಇರುಳರ್ ಶಿಕ್ಷಣ ಟ್ರಸ್ಟ್ ಮೂಲಕ ಆ ಹಣ ವಿನಿಯೋಗವಾಗಲಿದೆ.
ಜೈ ಭೀಮ್’ ಚಿತ್ರವನ್ನು ಸೂರ್ಯ ಮತ್ತು ಜ್ಯೋತಿಕಾ ಅವರ 2ಡಿ ಎಂಟರ್‌ಟೈನ್‌ಮೆಂಟ್ ನಿರ್ಮಿಸಿದ್ದು, ತಾ ಸೇ ಜ್ಞಾನವೇಲ್ ನಿರ್ದೇಶಿಸಿದ್ದಾರೆ. ಸೂರ್ಯ, ಲಿಜೋಮೋಲ್ ಜೋಸ್, ಮಣಿಕಂದನ್ ಮುಖ್ಯಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಕಾಶ್ ರಾಜ್, ರಜಿಶಾ ವಿಜಯನ್, ಜಯಪ್ರಕಾಶ್ ಮತ್ತು ರಾವ್ ರಮೇಶ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಒಡೆತನದ ನಿರ್ಮಾಣ ಸಂಸ್ಥೆಯು ಈ ವರ್ಷದ ಆರಂಭದಲ್ಲಿ ಆಮೆಜಾನ್ OTT ಜೊತೆ ನಾಲ್ಕು ಚಲನಚಿತ್ರಗಳ ಒಪ್ಪಂದವನ್ನು ಮಾಡಿಕೊಂಡಿತ್ತು. ಅದರ ಆಧಾರದಲ್ಲಿ ನೇರವಾಗಿ ಪ್ರೀಮಿಯರ್ ಆಗಲಿರುವ 2D ಎಂಟರ್‌ಟೈನ್‌ಮೆಂಟ್‌ನ ನಾಲ್ಕು ಚಲನಚಿತ್ರಗಳಲ್ಲಿ ‘ಜೈ ಭೀಮ್’ ಒಂದಾಗಿದೆ