ಚೆನ್ನೈ: ಸೂರ್ಯ ನಟನೆಯ ತಮಿಳು ಚಲನಚಿತ್ರ ‘ಜೈಭೀಮ್’ ವಿಶ್ವದಾದ್ಯಂತ ಮೆಚ್ಚುಗೆ ಪಾತ್ರವಾಗಿತ್ತಲ್ಲದೆ ಆಸ್ಕರ್ ಪುರಸ್ಕಾರಕ್ಕೂ ಆಯ್ಕೆಯಾಗಿತ್ತು. ಜೊತೆಗೆ ವನ್ನಿಯಾರ್ ಸಮುದಾಯದ ಭಾವನೆಗಳಿಗೆ ಚಿತ್ರದಲ್ಲಿರುವ ಕೆಲವು ಅಂಶಗಳು ಧಕ್ಕೆ ತಂದಿದೆ ಎಂಬ ಆರೋಪದ ಮೇರೆಗೆ ವಿವಾದಕ್ಕೆ ಸಿಲುಕಿ, ಸೂರ್ಯ ವಿರುದ್ಧ ಎಫ್ಐಆರ್ ಸಹ ದಾಖಲಾಗಿತ್ತು. ಇದೀಗ ಈ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.
ಕಳೆದ ಭಾನುವಾರ ನಟ ಸೂರ್ಯ, ನಿರ್ದೇಶಕ ಜ್ಞಾನವೇಲು ಜೊತೆಯಾಗಿ ಹೈಕೋರ್ಟ್ ಮೆಟ್ಟಿಲೇರಿ, ತಮ್ಮ ವಿರುದ್ಧ ಚೆನ್ನೈನ ವೇಲಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಅನ್ನು ರದ್ದು ಪಡಿಸುವಂತೆ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದರು. ಈ ಸಂಬಂಧ ನಿನ್ನೆ (ಜುಲೈ 18) ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ.
ಚಿತ್ರದಲ್ಲಿ ವನ್ನಿಯಾರ್ ಸಮುದಾಯವನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿ ರುದ್ರ ವನ್ನಿಯಾರ್ ಸೇನೆಯ ಕೆ.ಸಂತೋಷ್ ಎಂಬುವರು ತಮ್ಮ ಸಮುದಾಯದ ಸಂಘಟನೆ ಜೊತೆ ಸೇರಿನಟ ಸೂರ್ಯ ಮತ್ತು ಜ್ಞಾನವೇಲು ವಿರುದ್ಧ ದೂರು ದಾಖಲಿಸಿದ್ದರು. ಚಿತ್ರದಲ್ಲಿ ಖಳನಾಯಕನಿಗೆ ಗುರು ಎಂದು ಹೆಸರಿಸಿರುವುದು ಅವರ ಸಮುದಾಯದ ನಾಯಕರೊಬ್ಬರ ಮೇಲಿನ ದಾಳಿಯಾಗಿದೆ. ಈ ಚಲನಚಿತ್ರವನ್ನು ‘ವನ್ನಿಯಾರ್ ಫೋಬಿಯಾ’ ದಿಂದ ನಿರ್ಮಿಸಲಾಗಿದೆ ಮತ್ತು ಸಮುದಾಯಗಳ ನಡುವೆ ಕೋಮುಗಲಭೆಯನ್ನು ಪ್ರಚೋದಿಸುವ ಉದ್ದೇಶವನ್ನು ಹೊಂದಿದೆ ಎಂದು ಅರ್ಜಿದಾರರು ಆರೋಪಿಸಿದ್ದರು.
ನಿನ್ನೆ ಇದರ ವಿಚಾರಣೆ ನಡೆಸಿದ ಹೈಕೋರ್ಟ್, ದೂರು ಸಂಬಂಧ ಸೂರ್ಯ ಮತ್ತು ಜ್ಞಾನವೇಲು ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವಂತಿಲ್ಲ ಎಂದು ಹೇಳಿದ್ದು, ಈ ಪ್ರಕರಣವನ್ನು ಮತ್ತೆ ಜುಲೈ 21ಕ್ಕೆ ಮುಂದೂಡಿದೆ.