ಮಂಗಳೂರು : ಕಳೆದ ವರ್ಷ ಸುರತ್ಕಲ್ ಮಾರುಕಟ್ಟೆಯಲ್ಲಿ
ದುಷ್ಕರ್ಮಿಗಳಿಂದ ಕೊಲೆಗೀಡಾದ ಮಂಗಳಪೇಟೆ ನಿವಾಸಿ ಫಾಝಿಲ್ ಹೆಸರಲ್ಲಿ ಟ್ರಸ್ಟ್ ಸ್ಥಾಪಿಸಲಾಗಿದ್ದು, ಇಂದು ಉದ್ಘಾಟನೆಯಾಗಿದೆ. ಫಾಝಿಲ್ ಮಂಗಳಪೇಟೆ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಸ್ಥಾಪನೆಯಾಗಿದ್ದು, ಸಣ್ಣ ಸಹಾಯ ದೊಡ್ಡ ಬದಲಾವಣೆ ತರಬಹುದು ಎಂಬ ಸಂದೇಶ ನೀಡಲಾಗಿದೆ.
ಸಮಾಜ ಸೇವೆಯ ಉದ್ದೇಶದಿಂದ ಮೃತ ಫಾಝಿಲ್ ಕುಟುಂಬಸ್ಥರು, ಸ್ನೇಹಿತರು, ಹಿತೈಷಿಗಳು ಮತ್ತು ಊರವರು ಸೇರಿ ಈ ಟ್ರಸ್ಟ್ ಅನ್ನು ಸ್ಥಾಪಿಸಿದ್ದು, ಫಾಝಿಲ್ ಅವರ ತಂದೆ ಉಮರ್ ಫಾರೂಕ್ ಈ ಟ್ರಸ್ಟ್ನ ಸ್ಥಾಪಕರಾಗಿದ್ದಾರೆ. ಆದಿಲ್ ಮಹ್ರೂಫ್, ಶೌಕತ್, ಶಾಹಿಲ್, ಫಾಝಿಲ್, ಉಮರ್ ಫಾರೂಕ್, ಇಸ್ಮಾಯಿಲ್, ಖಾದರ್, ಹಮೀದ್, ಅರಫತ್ ಮತ್ತು ಸಿದ್ದೀಕ್ ಟ್ರಸ್ಟ್ನ ಸದಸ್ಯರು.
ಇಂದಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಂಗಳಪೇಟೆ ಮಸೀದಿ ಆಡಳಿತ ಸಮಿತಿಯ ಅಧ್ಯಕ್ಷ ಅಬ್ದುಲ್ ಹಮೀದ್, ಸೀದಿಯ ಖತೀಬ್ ಹಾಫಿಝ್ ಉವೈಸ್ ಹಿಸಾಮಿ ಉಳ್ಳಾಲ, ಸದರ್ ಮುಅಲ್ಲಿಂ ಶಂಶುದ್ದೀನ್ ಅಹ್ಸನಿ, ಮೌಲನಾ ಶರೀಫ್ ಉಸ್ತಾದ್, ಫಾಝಿಲ್ ತಂದೆ ಉಮರ್ ಫಾರೂಕ್, ವಕ್ಫ್ ಬೋರ್ಡಿನ ಮಾಜಿ ಸದಸ್ಯ ಹಸನಬ್ಬ, ಬಾಲ ಗ್ರಾಮ ಪಂ. ಸದಸ್ಯ ಸರ್ಫರಾಝ್ ನವಾಝ್, ಅಡ್ವಕೇಟ್ ಉಮರ್ ಫಾರೂಕ್, ಎಂ.ಹೆಚ್ ಹಸನ್ ಝುಹ್ರಿ ಮಂಗಳಪೇಟೆ ಸೇರಿದಂತೆ ಸ್ಥಳೀಯರು ಹಾಗೂ ಫಾಝಿಲ್ ಹಿತೈಸಿಗಳು ಉಪಸ್ಥಿತರಿದ್ದರು.
2022ರ ಜುಲೈ 28ರಂದು ರಾತ್ರಿ ಸುರತ್ಕಲ್ ಮಾರುಕಟ್ಟೆಯಲ್ಲಿ ಫಾಝಿಲ್ ಅವರ ಕೊಲೆ ನಡೆದಿತ್ತು. ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳ ತಂಡ ತಲವಾರುಗಳಿಂದ ಕೊಚ್ಚಿ ಹತ್ಯೆ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಸುರತ್ಕಲ್ ಪೊಲೀಸರು 7ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಬಂಧಿತರಲ್ಲಿ ಕೆಲವು ಮಂದಿ ಜಾಮೀನು ಪಡೆದು ಜೈಲ್ನಿಂದ ಬಿಡುಗಡೆಗೊಂಡಿದ್ದಾರೆ.