ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘಪರಿವಾರದ ನೆತ್ತರು ದಾಹಕ್ಕೆ ಅಮಾಯಕ ಯುವಕರ ಬಲಿ: SDPI

Prasthutha|

►ಫಾಝಿಲ್ ಕೊಲೆಯ ನೈತಿಕ ಹೊಣೆ ಹೊತ್ತು ಸಿಎಂ ಬೊಮ್ಮಾಯಿ ರಾಜೀನಾಮೆ ನೀಡಬೇಕು : ಅಬೂಬಕ್ಕರ್ ಕುಳಾಯಿ

- Advertisement -

ಮಂಗಳೂರು : ಕಳೆದ ರಾತ್ರಿ ಮಂಗಳೂರಿನ ಸುರತ್ಕಲ್‌ ನಲ್ಲಿ ದುಷ್ಕರ್ಮಿಗಳು ಅತ್ಯಂತ ಕ್ರೂರವಾಗಿ ನಡೆಸಿದ ಮುಸ್ಲಿಂ ಯುವಕ ಫಾಝಿಲ್ ಹತ್ಯೆಯನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಟು ಶಬ್ಧಗಳಲ್ಲಿ ಖಂಡಿಸುತ್ತಿದೆ. ಫಾಝಿಲ್ ಕೊಲೆಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ನೇರ ಹೊಣೆ. ‘ಕ್ರಿಯೆಗೆ ಪ್ರತಿಕ್ರಿಯೆ’ ಎಂದು ಈ ಹಿಂದೆ ಮಂಗಳೂರಿನಲ್ಲಿ ಹಿಂಸೆಗೆ ಪ್ರಚೋದಿಸುವ ಹೇಳಿಕೆ ನೀಡಿದ್ದ ಸಿಎಂ ಬೊಮ್ಮಾಯಿ ಅವರು ದಕ್ಷಿಣ ಕನ್ನಡದಲ್ಲಿ ನಡೆದ ಮೂರು ಕೊಲೆಗಳಿಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು SDPI ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅಬೂಬಕ್ಕರ್ ಕುಳಾಯಿ ಒತ್ತಾಯಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಇತ್ತೀಚೆಗೆ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ವಾರದ ಅಂತರದಲ್ಲಿ ಎರಡು ಸಮುದಾಯದ ಎರಡು ಯುವಕರ ಕೊಲೆ ನಡೆದಿತ್ತು. ಬಿಜೆಪಿ ಮುಖಂಡ ಪ್ರವೀಣ್ ಹತ್ಯೆಗೂ ಮುನ್ನ ಆರ್‌ ಎಸ್‌ ಎಸ್ ಸಹ ಸಂಘಟನೆಯ ಸದಸ್ಯರು ಬಡಪಾಯಿ ಮುಸ್ಲಿಂ ಯುವಕ ಮಸೂದ್‌ ಎಂಬಾತನ ಕೊಲೆ ಮಾಡಿದ್ದರು. ಆದರೆ ಸಿಎಂ ಅವರು ಕೇವಲ ಬಿಜೆಪಿ ಕಾರ್ಯಕರ್ತನ ಹತ್ಯೆಗೆ ಮೊಸಳೆ ಕಣ್ಣೀರು ಸುರಿಸಿದ್ದರು.

- Advertisement -

ಮುಸ್ಲಿಂ ಯುವಕನ ಹತ್ಯೆ ಬಗ್ಗೆ ಬಾಯಿ ತೆರೆಯದ ಸಿಎಂ ಅವರು ಕೇವಲ ಪ್ರವೀಣ್ ಹತ್ಯೆ ಮಾಡಿದವರನ್ನು ಮಾತ್ರ ಸದೆ ಬಡಿಯುವುದಾಗಿ ಮಾಧ್ಯಮಗಳ ಮುಂದೆ ಹೇಳಿಕೆ ಕೊಟ್ಟಿದ್ದರು. ತನಿಖೆ ನಡೆದು ಆರೋಪಿಗಳು ಪತ್ತೆಯಾಗುವ ಮುನ್ನವೇ ಒಂದು ಸಮುದಾಯವನ್ನು ಪರೋಕ್ಷವಾಗಿ ಗುರಿ ಮಾಡಿದ್ದರು. ಮಸೂದ್ ಹತ್ಯೆ ಮಾಡಿರುವ ಬಿಜೆಪಿಯ ಬೆಂಬಲಿಗರಾದ ಆರೋಪಿಗಳ ಬಗ್ಗೆ ಮೌನವಾಗಿರುವ ಸಿಎಂ, ಕೇವಲ ಪ್ರವೀಣ್ ಹತ್ಯೆ ಸಂಬಂಧ ಆವೇಶಗೊಂಡಿದ್ದು ಅವರ ತಾರತಮ್ಯ ನೀತಿಗೆ ಹಿಡಿದ ಕೈಗನ್ನಡಿ ಎಂದು ಅವರು ಟೀಕಿಸಿದ್ದಾರೆ.

ಸಿಎಂ ಬೊಮ್ಮಾಯಿಯವರು ಎಷ್ಟೊಂದು ಪಕ್ಷಪಾತಿ ಅಂದರೆ

ಬೆಳ್ಳಾರೆಗೆ ಬಂದು ಕೇವಲ ಪ್ರವೀಣ್ ಮನೆಗೆ ಭೇಟಿಕೊಟ್ಟು ಸಾಂತ್ವನ ಹೇಳಿ ಸರ್ಕಾರದ ಕಡೆಯಿಂದ 25 ಲಕ್ಷ ರೂಪಾಯಿ ಪರಿಹಾರ ಕೊಟ್ಟು ಹೋಗಿದ್ದಾರೆ. ಸಾಂತ್ವನ ಮತ್ತು ಪರಿಹಾರದ ವಿಚಾರದಲ್ಲಿ ತಾರತಮ್ಯ ಮಾಡಿರುವ ಮುಖ್ಯಮಂತ್ರಿಗಳು, ಪ್ರವೀಣ್ ಹತ್ಯೆಗೂ ಮುನ್ನ ಕೊಲೆಯಾಗಿದ್ದ ಮಸೂದ್ ಅವರ ಕುಟುಂಬವನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಬೆಳ್ಳಾರೆಗೆ ಬಂದಿದ್ದ ಸಿಎ‌ಂ, ಬೆಳ್ಳಾರೆ ಗ್ರಾಮದಲ್ಲೇ ಇರುವ ಮಸೂದ್ ಮನೆಗೆ ಹೋಗದೆ, ಮಸೂದ್ ಕುಟುಂಬಕ್ಕೆ ಸಾಂತ್ವನ ಹೇಳದೆ, ಅವರಿಗೆ ಪರಿಹಾರ ನೀಡದೆ ಪಕ್ಷಪಾತ ಮಾಡುವ ಮೂಲಕ ಸಂವಿಧಾನದ ಹೆಸರಲ್ಲಿ ಮಾಡಿರುವ ಪ್ರಮಾಣ ವಚನಕ್ಕೆ ದ್ರೋಹ ಮಾಡಿದ್ದಾರೆ.

ತಾನು ಕೇವಲ ಒಂದು ಪಕ್ಷಕ್ಕೆ ಮತ್ತು ಒಂದು ಸಮುದಾಯಕ್ಕೆ ಮಾತ್ರ ಸಿಎಂ ಎಂಬಂತೆ ಬೊಮ್ಮಾಯಿಯವರು ನಡೆದುಕೊಂಡಿರುವುದರಿಂದ ಸಂಘಪರಿವಾರದ ಕಾರ್ಯಕರ್ತರಿಗೆ ಇನ್ನಷ್ಟು ಮುಸ್ಲಿಮರ ಕೊಲೆ ಮಾಡುವ ಧೈರ್ಯ ಬಂದಂತಿದೆ. ನಾವು ಕೊಲೆ ಮಾಡಿದರೂ ಸಿಎಂ ಮತ್ತು ಬಿಜೆಪಿ ಸರ್ಕಾರ ನಮ್ಮ ಜೊತೆಗಿರುತ್ತದೆ, ನಮ್ಮನ್ನು ರಕ್ಷಣೆ ಮಾಡುತ್ತಾರೆ ಎಂಬ ಧೈರ್ಯ ಬಂದಿರುವ ಕಾರಣಕ್ಕೆ ಆರ್‌ ಎಸ್‌ ಎಸ್, ಪರಿವಾರದ ಕಾರ್ಯಕರ್ತರು ಸಾರ್ವಜನಿಕ ಸ್ಥಳದಲ್ಲೇ ಎಲ್ಲರ ಕಣ್ಣೆದುರಲ್ಲೇ ಸುರತ್ಕಲ್‌ನಲ್ಲಿ ಫಾಝಿಲ್ ಎಂಬ ಯುವಕನನ್ನು ಕೊಲೆ ಮಾಡಿದ್ದಾರೆ.

ರಾಜ್ಯದ ಮುಖ್ಯಮಂತ್ರಿ, ಗ್ರಹ ಸಚಿವರು, ಕ್ಯಾಬಿನೆಟ್ ಸಚಿವರು ಸೇರಿದಂತೆ ಪೊಲೀಸ್ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಮಂಗಳೂರಿನಲ್ಲಿರುವಾಗಲೇ ಪಕ್ಕದ ಸುರತ್ಕಲ್‌ ನಲ್ಲಿ ಈ ಕೊಲೆ ನಡೆದಿದೆ ಎಂದರೆ ರಾಜ್ಯದ ಕಾನೂನು ಸುವ್ಯವಸ್ಥೆ ಸಂಘ ಪರಿವಾರಕ್ಕೆ ಹೊರಗುತ್ತಿಗೆ ಕೊಡಲಾಗಿದೆಯೇ ಎಂದು ಅಬೂಬಕ್ಕರ್  ಆಕ್ರೋಶ ವ್ಯಕ್ತಪಡಿಸಿದರು .

ನಿರಂತರವಾಗಿ ಮುಸ್ಲಿಂ ವಿರೋಧಿ ನೀತಿ ಅನುಸರಿಸುತ್ತಿರುವ ಸಿಎಂ ಬೊಮ್ಮಾಯಿಯವರ ಕಾಲ ಬುಡದಲ್ಲೇ ಈ ಹತ್ಯೆ ನಡೆದಿರುವಾಗ ಹಲವು ಅನುಮಾನಗಳು ಸಹಜವಾಗಿ ಮೂಡುತ್ತಿವೆ. ಸಿಎಂ ಅವರು ಮಂಗಳೂರಿನಲ್ಲಿ ಬಂದು ಕೂತು ಸಂಘಪರಿವಾರದ ದುಷ್ಟರಿಗೆ ಧೈರ್ಯ ಕೊಟ್ಟು ಈ ಕೊಲೆ ಮಾಡಿಸಿದ್ದರೂ ಮಾಡಿಸಿರಬಹುದು ಎಂಬ ಅನುಮಾನ ನಮ್ಮನ್ನು ಕಾಡುತ್ತಿದೆ.

ಬೆಳ್ಳಾರೆಯಲ್ಲಿ ನಡೆದ ಎರಡು ಹತ್ಯೆ ಪ್ರಕರಣದಲ್ಲಿ ಅನೀತಿ, ಅನ್ಯಾಯ, ತಾರತಮ್ಯ, ಪಕ್ಷಪಾತ ಮಾಡಿರುವ ಸಿಎಂ ಬಸವರಾಜು ಬೊಮ್ಮಾಯಿ ಅವರು ಸುರತ್ಕಲ್‌ನಲ್ಲಿ ಫಾಝಿಲ್ ಹತ್ಯೆಗೆ ಕಾರಣಕರ್ತರು ಎಂದರೆ ತಪ್ಪಾಗಲ್ಲ.

ಮುಖ್ಯಮಂತ್ರಿಗಳು ಸಂವಿಧಾನಕ್ಕೆ ಬದ್ಧರಾಗಿದ್ದರೆ ಪ್ರವೀಣ್ ಮನೆಗೆ ಹೋದಂತೆ ಫಾಝಿಲ್ ಮನೆಗೂ ಹೋಗಬೇಕು, ಫಾಝಿಲ್ ಕುಟುಂಬಕ್ಕೂ 25 ಲಕ್ಷ ಪರಿಹಾರ ನೀಡಬೇಕು. ಮತ್ತೊಮ್ಮೆ ಬೆಳ್ಳಾರೆಗೆ ಹೋಗಿ ಮಸೂದ್ ಕುಟುಂಬಕ್ಕೆ ಸಾಂತ್ವನ ಹೇಳಿ 25 ಲಕ್ಷ ಪರಿಹಾರವನ್ನು ಕೊಟ್ಟು ಬರಬೇಕು. ಇಲ್ಲದಿದ್ದರೆ ನಿಮ್ಮನ್ನು ಈ ರಾಜ್ಯದ ಮುಖ್ಯಮಂತ್ರಿ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಫಾಝಿಲ್ ಹತ್ಯೆಗೆ ಸಿಎಂ ಬೊಮ್ಮಾಯಿ ಅವರ ಪಕ್ಷಪಾತ ನೀತಿ ಹೇಗೆ ಕಾರಣ ಆಗಿದೆಯೋ, ಅದೇ ರೀತಿ ಬಿಜೆಪಿ ನಾಯಕರು ಮತ್ತು ಕೆಲವು ಮಾಧ್ಯಮಗಳ ಪ್ರಚೋದನೆಯೂ ಕಾರಣ ಆಗಿದೆ ಎನ್ನಬಹುದು. ಪ್ರವೀಣ್ ಹತ್ಯೆ ನಡೆದಾಗ ಮುಸ್ಲಿಂ ಸಮುದಾಯದ ವಿರುದ್ಧ ಪ್ರಚೋದನಕಾರಿ ಹೇಳಿಕೆ ಕೊಟ್ಟಿರುವ ಬಿಜೆಪಿ ಮತ್ತು ಸಂಘಪರಿವಾರದ ನಾಯಕರ ದ್ವೇಷದ ಮಾತುಗಳು, ಕೆಲವೊಂದು ಮಾಧ್ಯಮಗಳು ಮಾಡಿರುವ ಪ್ರಚೋದನೆಗಳು ದಕ್ಷಿಣ ಕನ್ನಡದಲ್ಲಿ ಅಶಾಂತಿ ಸೃಷ್ಟಿಸಿದೆ.

ಸಂಘಪರಿವಾರ ಮತ್ತು ಅವರ ಕೃಪಾಪೋಷಿತ ಕೆಲವು ಮಾಧ್ಯಮಗಳ ಹರಡಿರುವ ದ್ವೇಷವೇ ಫಾಝಿಲ್‌ನನ್ನು ಬಲಿ ಪಡೆದಿದೆ ಎಂದು SDPI ನೇರವಾಗಿ ಆರೋಪ ಮಾಡುತ್ತಿದೆ. ಫಾಝಿಲ್ ಹತ್ಯೆ ಸಂಬಂಧ ಬೊಮ್ಮಾಯಿ ಸರ್ಕಾರದ ಪೊಲೀಸರ ಮೇಲೆ ನಂಬಿಕೆ ಇಲ್ಲದಿರುವುದರಿಂದ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು, ಹಾಲಿ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಸುರತ್ಕಲ್‌ನ ಫಾಝಿಲ್ ಕೊಲೆ ಪ್ರಕರಣದ ತನಿಖೆಗೆ ನಡೆಸಬೇಕು. ಬಿಜೆಪಿ‌ ಸರ್ಕಾರದ ಒತ್ತಡದ ಹಿನ್ನೆಲೆಯಲ್ಲಿ ಪ್ರವೀಣ್ ಕೊಲೆ ಪ್ರಕರಣದಲ್ಲಿ ಪೊಲೀಸರು ಅಮಾಯಕರನ್ನು ಆರೋಪಿಗಳು ಎಂದು ಫಿಕ್ಸ್ ಮಾಡಿರುವುದರಿಂದ ಬೆಳ್ಳಾರೆಯ ಮಸೂದ್ ಮತ್ತು ಪ್ರವೀಣ್ ಕೊಲೆ ಪ್ರಕರಣವನ್ನು ಸಹ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು SDPI ಆಗ್ರಹಿಸುತ್ತಿದೆ.

ಅದಲ್ಲದೇ ಇದೇ ರೀತಿಯ ದುರಹಂಕಾರ ಮತ್ತು ಸ್ವಜನ ಪಕ್ಷಪಾತದ ಆಡಳಿತ ನಡೆಸಿದರೆ ತೀವ್ರ ರೀತಿಯ ಪ್ರತಿರೋದ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.



Join Whatsapp