►ಫಾಝಿಲ್ ರನ್ನು ಗುರಿಯಾಗಿಸಿ ಹತ್ಯೆ ಮಾಡಿದ್ದಾರೆ
►ಹತ್ಯೆಗೆ ಪ್ರೇಮ ಪ್ರಕರಣ, ಶಿಯಾ – ಸುನ್ನಿ ಕಾರಣವಲ್ಲ
►ಒಂದೇ ಸಮುದಾಯದ ಆರೇಳು ಮಂದಿಯನ್ನು ಟಾರ್ಗೆಟ್ ಮಾಡಿದ ಆರೋಪಿಗಳು
ಮಂಗಳೂರು: ಹೊರವಲಯದ ಸುರತ್ಕಲ್ ನಲ್ಲಿ ನಡೆದ ಫಾಝಿಲ್ ಹತ್ಯೆಗೆ ಸಂಬಂಧಿಸಿದಂತೆ ಆರ್ ಎಸ್ ಎಸ್ ಸಹ ಸಂಘಟನೆ ಬಜರಂಗದಳಕ್ಕೆ ಸೇರಿದ 6 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಫಾಝಿಲ್ ರನ್ನು ಹತ್ಯೆಗೈದಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಹಂತಕರ ಪತ್ತೆಗೆ ಸುಮಾರು 7-8 ತಂಡಗಳನ್ನು ರಚಿಸಲಾಗಿತ್ತು. ಕೃತ್ಯಕ್ಕೆ ಉಪಯೋಗಿಸಿದ ಕಾರು ಅಜಿತ್ ಕ್ರಾಸ್ತಾ ಎಂಬಾತನಿಗೆ ಸೇರಿದ್ದು, ಕಾರನ್ನು ವಶಕ್ಕೆ ಪಡೆದು ಕಾರಿನ ಮಾಲೀಕನನ್ನು ಬಂಧಿಸಲಾಗಿದೆ. ಅಜಿತ್ ಕ್ರಾಸ್ತಾಗೆ ಕೊಲೆಯ ಮಾಹಿತಿ ಇದ್ದಾಗ್ಯೂ ಅವರು ಕಾರು ನೀಡಿ ಕೊಲೆಗೆ ಸಹಕರಿಸಿದ್ದಾರೆ. ಆದ್ದರಿಂದ ಅವರನ್ನೂ ಬಂಧಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೇರಳಕ್ಕೆ ತೆರಳಿದ ತನಿಖಾ ತಂಡ ಅಲ್ಲಿ ಶೋಧ ಕಾರ್ಯ ನಡೆಸಿತ್ತು ಎಂದು ಅವರು ಮಾಹಿತಿ ನೀಡಿದರು.
ಒಟ್ಟು ಆರು ಮಂದಿಯನ್ನು ಇಂದು ಬೆಳಗ್ಗೆ ಬಂಧಿಸಿದ್ದೇವೆ. ಸುಹಾಶ್ ಶೆಟ್ಟಿ (29), ಮೋಹನ್ (26), ಗಿರಿಧರ್ (23), ಅಭಿಷೇಕ್ (21), ಶ್ರೀನಿವಾಸ್ (23) ಮತ್ತು ದೀಕ್ಷಿತ್ (21) ಬಂಧಿತರು.
ಕೃತ್ಯಕ್ಕೆ ಸಂಚು
ಜು.26ರಂದು ರಾತ್ರಿ ಬಜಪೆ ನಿವಾಸಿ ಸುಹಾಶ್ ಶೆಟ್ಟಿ ತನ್ನ ಸ್ನೇಹಿತ ಅಭಿಷೇಕ್ ಗೆ ಕರೆ ಮಾಡಿ ಕೃತ್ಯದ ಬಗ್ಗೆ ವಿವರವಾಗಿ ಚರ್ಚಿಸುತ್ತಾನೆ. ಜು.27ರಂದು ಮಧ್ಯಾಹ್ನದ ವೇಳೆಗೆ ಯಾರನ್ನಾದರೂ ಕೊಲೆ ಮಾಡಬೇಕು ಎಂದು ತಿಳಿಸುತ್ತಾನೆ. ಇದಕ್ಕೆ ಪ್ರತಿಕ್ರಿಯಿಸಿದ ಅಭಿಷೇಕ್, ನಾಳೆ ಮುಖತಃ ಭೇಟಿ ಮಾಡಿ ಮಾತನಾಡೋಣ ಎಂದು ಹೇಳಿ ಮೊಬೈಲ್ ಕರೆ ಕಟ್ ಮಾಡುತ್ತಾನೆ. ಅದಾದ ಬಳಿಕ ಮರುದಿನ ಅಂದರೆ ಜು. 27ರಂದು ಸುಹಾಶ್ ಶೆಟ್ಟಿ ಸುರತ್ಕಲ್ ಹೊರವಲಯದಲ್ಲಿರುವ ಹೋಟೆಲ್ ಗೆ ಹೋಗಿ ಅಲ್ಲಿಗೆ ಗಿರಿಧರ್ ನನ್ನು ಕರೆಸಿಕೊಳ್ಳುತ್ತಾನೆ. ಕಾರು, ಶಸ್ತ್ರಾಸ್ತ್ರ ಮತ್ತು ಕೆಲವು ಹುಡುಗರು ಬೇಕು ಎಂಬುದರ ಬಗ್ಗೆ ಚರ್ಚೆ ನಡೆಸುತ್ತಾರೆ. ಅಲ್ಲಿಗೆ ಮೋಹನ್ ಎಂಬಾತನೂ ಬಂದು ಸೇರಿಕೊಳ್ಳುತ್ತಾನೆ. ಕೃತ್ಯಕ್ಕೆ ತನ್ನ ಮೂವರು ಸ್ನೇಹಿತರು ಕೂಡ ಬರುತ್ತಾರೆ ಎಂದು ಮೋಹನ್ ಭರವಸೆ ನೀಡುತ್ತಾನೆ.
ಸುಹಾಶ್ ಶೆಟ್ಟಿಗೆ ಅಭಿಷೇಕ್ ಪರಿಚಯವಿದ್ದರೆ, ಮೋಹನ್ ಗೆ ನೇರವಾಗಿ ಶ್ರೀನಿವಾಸ್, ದೀಕ್ಷಿತ್ ಸಂಪರ್ಕ ಇರುತ್ತದೆ. ಮೋಹನ್ ಅಲಿಯಾಸ್ ನೇಪಾಳಿ ಮೋಹನ್ ತನ್ನ ಸ್ನೇಹಿತನಿಂದ ಕಾರು ತರುವುದಾಗಿ ಭರವಸೆ ನೀಡುತ್ತಾನೆ. ಅದರಂತೆ 27ರಂದು ಮಧ್ಯಾಹ್ನ ಮೋಹನ್ ಮತ್ತು ಗಿರಿಧರ್ ಹೋಗಿ ಬಾಡಿಗೆಗೆ ಕಾರು ತರುತ್ತಾರೆ. ಗಿರಿಧರ್ ಕಾರು ಡ್ರೈವಿಂಗ್ ಮಾಡುತ್ತಾನೆ. ನಮ್ಮ ಕೆಲಸ ಸಕ್ಸಸ್ ಆದರೆ ಮೂರು ದಿನಕ್ಕೆ 15 ಸಾವಿರ ರೂ. ಬಾಡಿಗೆ ನೀಡುವುದಾಗಿ ಕಾರು ಮಾಲೀಕನಿಗೆ ಅವರು ಭರವಸೆ ನೀಡುತ್ತಾರೆ ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ ಎಂದು ಪೊಲೀಸ್ ಆಯುಕ್ತರು ತಿಳಿಸುತ್ತಾರೆ.
ಅದಾದ ಬಳಿಕ 27ರಂದು ಸಂಜೆಯ ಬಳಿಕ ಸುರತ್ಕಲ್ ಹೊರವಲಯದಲ್ಲಿ ಸುಹಾಶ್ ಶೆಟ್ಟಿ, ಗಿರಿಧರ್ ಮತ್ತು ಮೋಹನ್ ಕೊಲೆಗೆ ಸಂಚು ರೂಪಿಸುತ್ತಾರೆ. ಈ ವೇಳೆ ಅವರಿಗೆ ಆಗದವರ ಕೆಲವರ ಹೆಸರುಗಳ ಬಗ್ಗೆ ಚರ್ಚೆ ನಡೆಸುತ್ತಾರೆ. ಅಂದು ಸಂಜೆವರೆಗೆ ಅಭಿಷೇಕ್, ದೀಕ್ಷಿತ್, ಶ್ರೀನಿವಾಸ್ ಅಲ್ಲಿಗೆ ಬಾರದ ಹಿನ್ನೆಲೆಯಲ್ಲಿ ಅಂದು ರಾತ್ರಿ ಶುಹಾಸ್ ಶೆಟ್ಟಿ ಕಾವೂರು ಜ್ಯೋತಿ ನಗರದ ತನ್ನ ಸ್ನೇಹಿತನ ಮನೆಗೆ ಹೋಗಿ ಅಲ್ಲಿ ರಾತ್ರಿ ತಂಗುತ್ತಾನೆ. ಮರು ದಿನ ಬೆಳಗ್ಗೆ ಅಂದರೆ 28ರಂದು ಬೆಳಗ್ಗೆ 5.30ಕ್ಕೆ ತನ್ನ ಸ್ನೇಹಿತನ ಜೊತೆ ಕಾರಿನಲ್ಲಿ, ಮೂರು ತಲವಾರು, ಡ್ರ್ಯಾಗನ್ ಜೊತೆ ಬಂಟ್ವಾಳದ ಕಾರಿಂಜೇಶ್ವರ ದೇವಸ್ಥಾನಕ್ಕೆ ತೆರಳುತ್ತಾನೆ. 27ರಂದು ಸುಹಾಸ್ ಶೆಟ್ಟಿ ಸೇರಿ ಇತರರಿಗೆ ಹಳೆಯ ಅಪರಾಧ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್ ಗೆ ಹಾಜರಾಗಬೇಕಾಗಿರುತ್ತದೆ. ಕೋರ್ಟ್ ಹಾಜರಾಗಲು ಬಂದು ಅಲೋಶಿಯಸ್ ಪ್ರೈಮರಿ ಸ್ಕೂಲ್ ಬಳಿ ಎಲ್ಲರೂ ಒಟ್ಟಿಗೆ ಸೇರುತ್ತಾರೆ. ಅಲ್ಲಿ ಕೊಲ್ಲಬೇಕಾದ ವ್ಯಕ್ತಿಯ ಟಾರ್ಗೆಟ್ ಬಗ್ಗೆ ಚರ್ಚೆ ನಡೆಯುತ್ತದೆ. ಅಲ್ಲಿ ಮುಹಮ್ಮದ್ ಫಾಝಿಲ್ ಬಗ್ಗೆ ಚರ್ಚೆ ಮಾಡಿ, ಅವರನ್ನು ಹತ್ಯೆಗೈಯ್ಯಲು ತೀರ್ಮಾನಿಸುತ್ತಾರೆ ಎಂದು ಶಶಿಕುಮಾರ್ ಮಾಹಿತಿ ನೀಡಿದರು.
ಕೋರ್ಟ್ ಗೆ ಹಾಜರಾದ ಬಳಿಕ ಮಂಕಿ ಕ್ಯಾಪ್ ಖರೀದಿಸುತ್ತಾರೆ. ಅಲ್ಲಿಂದ ಸುರತ್ಕಲ್ ಹೊರವಲಯದ ಕಿನ್ನಿಗೋಳಿ ಎಂಬಲ್ಲಿ ಬಾರ್ ಗೆ ಹೋಗಿ ಸುಹಾಶ್, ಮೋಹನ್, ಅಭಿ, ಶ್ರೀನಿವಾಸ್ ಮಧ್ಯಾಹ್ನದ ಊಟ ಮಾಡಿ ನಂತರ ಮತ್ತಿಬ್ಬರು ಆರೋಪಿಗಳನ್ನು ಸೇರಿಕೊಂಡು ಫಾಝಿಲ್ ಎಲ್ಲಿದ್ದಾನೆ ಎಂದು ತಿಳಿದುಕೊಳ್ಳಲು ಮುಂದಾಗುತ್ತಾರೆ. ಫಾಝಿಲ್ ಮಂಗಳಪೇಟೆಯಲ್ಲಿರುತ್ತಾರೆ ಎಂದು ತಿಳಿದುಕೊಂಡು ಸುರತ್ಕಲ್ ಜಂಕ್ಷನ್ ಗೆ ಬಂದು ಅಲ್ಲಿ ಕಾಯುತ್ತಿರುತ್ತಾರೆ. ಫಾಝಿಲ್ ಚಲನವಲನದ ಮೇಲೆ ನಿಗಾ ಇಟ್ಟಿರುತ್ತಾರೆ. ಜಂಕ್ಷನ್ ನಲ್ಲಿ ಎರಡು ಮೂರು ಬಾರಿ ಕಾರಿನಲ್ಲಿ ಆರೋಪಿಗಳು ಓಡಾಡುತ್ತಾರೆ ಎಂದು ಅವರು ತಿಳಿಸಿದರು.
ಅಂದು ರಾತ್ರಿ 8.30ರ ಸುಮಾರಿಗೆ ಒಟ್ಟು ಆರು ಜನರ ಹಂತಕರ ತಂಡ ಸುರತ್ಕಲ್ ಜಂಕ್ಷನ್ ಬಳಿ ಬರುತ್ತದೆ. ಮೂವರು ತಲವಾರುಗಳೊಂದಿಗೆ ಕಾರಿನಿಂದ ಕೆಳಗಿಳಿಯುತ್ತಾರೆ. ಸುಹಾಸ್ ಶೆಟ್ಟಿ, ಅಭಿಷೇಕ್, ಮೋಹನ್ ಹತ್ಯೆಯಲ್ಲಿ ನೇರವಾಗಿ ಪಾಲ್ಗೊಳ್ಳುತ್ತಾರೆ. ಗಿರಿಧರ್ ಡ್ರೈವಿಂಗ್ ನಲ್ಲಿರುತ್ತಾನೆ, ಶ್ರೀನಿವಾಸ್ ಎಂಬಾತ, ಯಾರಾದರೂ ತಡೆಯಲು ಬಂದರೆ ಅವರನ್ನು ಎದುರಿಸಲು ಸಿದ್ಧನಾಗಿ ನಿಂತಿರುತ್ತಾನೆ. ದೀಕ್ಷಿತ್ ಕಾರಿನಲ್ಲಿ ಕೂತಿರುತ್ತಾನೆ. ಕೃತ್ಯದ ಬಳಿಕ ಅದೇ ಕಾರಿನಲ್ಲಿ ಆರು ಮಂದಿ ಕೂಡ ಪಾಲಿಮಾರ್ ರಸ್ತೆ ಮೂಲಕ ಕಾರ್ಕಳ ತಾಲೂಕಿನ ಇನ್ನಾ ಗ್ರಾಮಕ್ಕೆ ತೆರಳಿ ಅಲ್ಲಿನ ನಿರ್ಜನ ಪ್ರದೇಶದಲ್ಲಿ ಕಾರು ಬಿಟ್ಟು ಶ್ರೀನಿವಾಸನ ಸ್ನೇಹಿತನ ಕಾರು ತರಿಸಿ ಅಲ್ಲಿಂದ ಪರಾರಿಯಾಗಿ ಅಡಗಿಕೊಳ್ಳುತ್ತಾರೆ. ಕೊನೆಗೆ ಇಂದು ಬೆಳಗ್ಗಿನ ಜಾವ ಆರೋಪಿಗಳು ಇರುವ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಉದ್ಯಾವರ ಹೊರವಲಯದಲ್ಲಿ ಪೊಲೀಸ್ ತಂಡ ಎಲ್ಲಾ ಆರು ಮಂದಿಯನ್ನೂ ಬಂಧಿಸಿದೆ ಎಂದು ಶಶಿಕುಮಾರ್ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಇಂದು ಬೆಳಗ್ಗೆ ವಶಕ್ಕೆ ಪಡೆದು ನಿರಂತರ ವಿಚಾರಣೆ ನಡೆಸಲಾಗಿದೆ. ಕೃತ್ಯ ನಡೆಸಿದ್ದನ್ನು ಅವರು ಒಪ್ಪಿಕೊಂಡಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಿ ಅವರನ್ನು ಕಸ್ಟಡಿಗೆ ಪಡೆದುಕೊಳ್ಳಬೇಕಾಗಿದೆ ಎಂದು ಅವರು ತಿಳಿಸಿದರು.
ಆರೋಪಿಗಳ ಹಿನ್ನೆಲೆ
ಪ್ರಮುಖ ಆರೋಪಿ ಸುಹಾಶ್ ಶೆಟ್ಟಿ (29) ಬಜಪೆ ನಿವಾಸಿಯಾಗಿದ್ದು, ಈತ ವಿರುದ್ಧ ಬಜಪೆಯಲ್ಲಿ ಪೊಲೀಸ್ ಠಾಣೆಯಲ್ಲಿ ಮೂರು, ಬೆಳ್ತಂಗಡಿ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. 2010ರಲ್ಲಿ ಒಂದು ಕೊಲೆ ಪ್ರಕರಣದಲ್ಲಿ ಈತ ಭಾಗಿಯಾಗಿದ್ದ.
ಮೋಹನ್ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಒಂದು, ಕಾವೂರಿನಲ್ಲಿ ಒಂದು ಪ್ರಕರಣ ದಾಖಲಾಗಿದೆ. ಗಿರಿಧರ್, ಕುಳಾಯಿ ವಿದ್ಯಾನಗರ ನಿವಾಸಿಯಾಗಿದ್ದು, ಈತನ ವಿರುದ್ಧ ಎರಡು ಅಪರಾಧ ಪ್ರಕರಣಗಳಿವೆ, ಅಭಿಷೇಕ್, ಕಾಟಿಪಳ್ಳ ನಿವಾಸಿಯಾಗಿದ್ದು, ಈತನ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಎರಡು ಪ್ರಕರಣಗಳಿವೆ, ಶ್ರೀನಿವಾಸ ವಿರುದ್ಧ ನಾಲ್ಕು ಪ್ರಕರಣಗಳಿದ್ದು, ದೀಕ್ಷಿತ್ ವಿರುದ್ಧ ಮೂರು ಪ್ರಕರಣಗಳಿವೆ. ಇವರೆಲ್ಲರೂ ಅಪರಾಧ ಹಿನ್ನೆಲೆಯವರಾಗಿದ್ದಾರೆ. ಮೂವರು ರೌಡಿ ಶೀಟರ್ ಗಳಾಗಿದ್ದಾರೆ ಎಂದು ಶಶಿಕುಮಾರ್ ತಿಳಿಸಿದರು.
ಉಳಿದಂತೆ ಕೊಲೆಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು. ಇಡೀ ಪ್ರಕರಣದಲ್ಲಿ ಐದಾರು ವ್ಯಕ್ತಿಗಳನ್ನು ಕೊಲ್ಲಲು ಸಂಚು ನಡೆದಿದೆ. ಇದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಸದ್ಯಕ್ಕೆ ಏಳು ಮಂದಿಯ ಬಂಧನವಾಗಿದ್ದು, ಇನ್ನೂ ಕೆಲವರ ಬಂಧನ ಆಗಬೇಕಾಗಿದೆ. ಆರೋಪಿಗಳನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗುವುದು. ಈ ವೇಳೆ ಹತ್ಯೆಗೆ ಕಾರಣ, ಉದ್ದೇಶದ ಬಗ್ಗೆ ತಿಳಿಯಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮೃತಪಟ್ಟ ಫಾಝಿಲ್ ಅವರನ್ನು ಯಾಕೆ ಟಾರ್ಗೆಟ್ ಮಾಡಿದರು ಎಂಬುದು ಕೂಡ ತನಿಖೆಯಿಂದ ತಿಳಿಯಬೇಕಾಗಿದೆ. ಜು.26ರಂದು ಸಂಜೆಯಿಂದ ಯಾರನ್ನಾದರೂ ಹತ್ಯೆ ಮಾಡಬೇಕು ಎಂದು ಚರ್ಚೆಯಾಗಿದೆ. ಈ ಹಿಂದೆ ನಡೆದ ಹತ್ಯೆಗೂ ಇದಕ್ಕೂ ಸಂಬಂಧ ಇದೆಯಾ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಶಶಿಕುಮಾರ್ ತಿಳಿಸಿದರು.
ಟಾರ್ಗೆಟ್ ಮಾಡಿದ ಆರೇಳು ವ್ಯಕ್ತಿಗಳ ಹೆಸರನ್ನು ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಅವರು ಎಲ್ಲಿರುತ್ತಾರೆ, ಅವರ ಕೆಲಸ ಕಾರ್ಯಗಳ ಬಗ್ಗೆಯೂ ಆರೋಪಿಗಳು ಚರ್ಚೆ ನಡೆಸಿರುವುದು ತಿಳಿದುಬಂದಿದೆ ಎಂದು ಹೇಳಿದರು.
ಫಾಝಿಲ್ ರನ್ನು ಮಿಸ್ ಆಗಿ ಕೊಲೆ ಮಾಡಲಾಗಿದೆ, ಆರೋಪಿಗಳ ಗುರಿ ಬೇರೆಯವರಾಗಿದ್ದರು ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಇದು ಸುಳ್ಳು. ನಿಖರವಾಗಿ ಗುರಿಯಾಗಿಸಿ ಫಾಝಿಲ್ ರನ್ನು ಹತ್ಯೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಎರಡು ಮೂರು ಬಾರಿ ಆರೋಪಿಗಳು ಸುರತ್ಕಲ್ ಸುತ್ತ ಮುತ್ತ ತಿರುಗಾಡಿದ್ದಾರೆ. ನಿರ್ದಿಷ್ಟ ಸಮುದಾಯದ ಆರೇಳು ಜನರನ್ನು ಗುರಿಯಾಗಿಸಲಾಗಿದೆ. ಆರೋಪಿಗಳಲ್ಲಿ ಒಬ್ಬನಿಗೆ ಫಾಝಿಲ್ ರ ಪರಿಚಯ ಮತ್ತು ಚಟುವಟಿಕೆಗಳ ಬಗ್ಗೆ ಮಾಹಿತಿ ಇತ್ತು. ಆತನೇ ಫಾಝಿಲ್ ಹೆಸರನ್ನು ಹೇಳಿ ಕೊಲೆಗೆ ಕಾರಣನಾಗಿದ್ದಾನೆ. ಆರೋಪಿಗಳಲ್ಲಿ ಸುಹಾಶ್ ಶೆಟ್ಟಿ ಸೇರಿದಂತೆ ಮೂವರು ರೌಡಿ ಶೀಟರ್ ಗಳಾಗಿದ್ದಾರೆ ಎಂದು ಶಶಿಕುಮಾರ್ ಹೇಳಿದರು.
ಫಾಝಿಲ್ ಹತ್ಯೆಗೆ ಪ್ರೇಮ ಪ್ರಕರಣ, ಸಮುದಾಯದ ಒಳಗಿನ ಪಂಗಡಗಳ ಕಾರಣ ಎಂದು ಕೆಲವರು ಪ್ರಚಾರ ಮಾಡಿದ್ದರು. ಅವೆಲ್ಲವೂ ಸುಳ್ಳು. ಕೆಲವು ಮಾಧ್ಯಮದವರು ಇಂತಹ ಸುದ್ದಿ ಪ್ರಸಾರ ಮಾಡಿದ್ದಾರೆ. ಇದರಿಂದ ಫಾಝಿಲ್ ಅಂತ್ಯಸಂಸ್ಕಾರದ ವೇಳೆ ಕೆಲವರು ಮಾಧ್ಯಮದವರ ಚಿತ್ರೀಕರಣಕ್ಕೆ ತಡೆ ಒಡ್ಡಿ ಕ್ಯಾಮರಾ ಆಫ್ ನಡೆಸಿರುವ ಘಟನೆಯೂ ನಡೆದಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಫಾಝಿಲ್ ಹತ್ಯೆಯ ಬಳಿಕ ಕೆಲವರು ಇದನ್ನು ನಾವೇ ಮಾಡಿಸಿದ್ದೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅವರನ್ನೂ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಶಶಿಕುಮಾರ್ ತಿಳಿಸಿದರು.
ಫಾಝಿಲ್ ಕೃತ್ಯ ನಡೆದಂದು ಮಧ್ಯಾಹ್ನ 12ರಿಂದ ಸಂಜೆ 6.30ರವರೆಗೆ ಆತನ ಸ್ನೇಹಿತನ ಜತೆ ಮಂಗಳೂರು ಸಿಟಿಯಲ್ಲಿ ಓಡಾಡಿದ್ದಾರೆ. ಸಂಜೆಯ ಬಳಿಕ ಸ್ನೇಹಿತನ ಜೊತೆ ಸುರತ್ಕಲ್ ನ ಎಸ್. ಕೆ. ಮೊಬೈಲ್ ಅಂಗಡಿ ಬಳಿ ಬಂದಿದ್ದಾರೆ. ಅವರಿಗೆ ಅಲ್ಲಿ ಕೆಲವು ಸ್ನೇಹಿತರು ಇದ್ದರು ಎಂದು ಹೇಳಿದರು.
ಕೃತ್ಯ ನಡೆದ ದಿನ ನನ್ನನ್ನು ಕೂಡ ಕಾರಿನಲ್ಲಿ ಫಾಲೋ ಮಾಡಿದ್ದಾರೆ, ನನಗೆ ಜೀವ ಭಯವಿದೆ ಎಂದು ವ್ಯಕ್ತಿಯೊಬ್ಬರು ಸುರತ್ಕಲ್ ಇನ್ಸ್ ಪೆಕ್ಟರ್ ಗೆ ಮೊಬೈಲ್ ನಲ್ಲಿ ಕರೆ ಮಾಡಿ ತಿಳಿಸಿದ್ದರು. ಅವರನ್ನೂ ವಿಚಾರಣೆಗೆ ಕರೆಯಲು ಸೂಚಿಸಿದ್ದೇನೆ. ಇನ್ಸ್ ಪೆಕ್ಟರ್ ಗೆ ಕರೆ ಮಾಡಿದ ಬಳಿಕ ಪೊಲೀಸರು ಅಲರ್ಟ್ ಆಗಿ ತಪಾಸಣೆ ಹೆಚ್ಚಿಸಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಶಶಿಕುಮಾರ್ ಉತ್ತರಿಸಿದರು.
ಆರೋಪಿಗಳು ಇನ್ನಾ ಗ್ರಾಮದಲ್ಲಿ ಕಾರು ತ್ಯಜಿಸಿ ಬೇರೆ ಕಾರಿನಲ್ಲಿ ಪರಾರಿಯಾಗಿದ್ದರು. ಅಲ್ಲಿಗೆ ಕರೆಸಿಕೊಂಡ ಕಾರು ಯಾರದ್ದು, ಅದರ ಮಾಲೀಕರು ಯಾರು ಎಂಬುದನ್ನೂ ಪತ್ತೆ ಮಾಡಲಾಗುವುದು. ಆರೋಪಿಗಳಿಗೆ ಆಶ್ರಯ ಕೊಟ್ಟವರ ಮಾಹಿತಿ ದೊರೆತಿದ್ದು, ಅವರನ್ನೂ ಕೂಡ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದರು.