ನವದೆಹಲಿ: ದೆಹಲಿಯಲ್ಲಿನ ವಾಯುಮಾಲಿನ್ಯ ನಿಗ್ರಹಿಸಲು ತಾತ್ಕಾಲಿಕ ಕ್ರಮಗಳು ಸಾಕಾಗುವುದಿಲ್ಲ ಎಂದು ಬುಧವಾರ ತಿಳಿಸಿರುವ ಸುಪ್ರೀಂಕೋರ್ಟ್, ಸಮಸ್ಯೆ ಎದುರಿಸಲು ಸೂಕ್ತ ಸಂಖ್ಯಾಶಾಸ್ತ್ರೀಯ, ವೈಜ್ಞಾನಿಕ ಅಧ್ಯಯನ ನಡೆಸಿ ಮಾಲಿನ್ಯದ ತುರ್ತು ಪರಿಸ್ಥಿತಿ ಆಧರಿಸಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.
ದೇಶದ ರಾಜಧಾನಿಯ ವಾಯು ಮಾಲಿನ್ಯ ಜಗತ್ತಿಗೆ ನಕಾರಾತ್ಮಕ ಅಭಿಪ್ರಾಯ ಮೂಡಿಸುತ್ತದೆ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಹಾಗೂ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಸೂರ್ಯ ಕಾಂತ್ ಅವರಿದ್ದ ಪೀಠ ತಿಳಿಸಿತು.
ಚಳಿಗಾಲದ ತಿಂಗಳುಗಳಲ್ಲಿ ಉತ್ತರ ಭಾರತದಲ್ಲಿ ಚಾಲ್ತಿಯಲ್ಲಿರುವ ವಿಚಿತ್ರ ಹವಾಮಾನ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಕ್ರಮ ತೆಗೆದುಕೊಳ್ಳಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತುರ್ತು ಪರಿಸ್ಥಿತಿ ಆಧರಿಸಿ ಪ್ರತಿಕ್ರಿಯೆ ನೀಡಬೇಕು (ಗ್ರೇಡೆಡ್ ರೆಸ್ಪಾನ್ಸ್). ಇದರಿಂದಾಗಿ ವಾಯು ಗುಣಮಟ್ಟ ಸೂಚ್ಯಂಕವನ್ನು ಸುಧಾರಿಸಬಹುದು ಎಂದು ಅದು ವಿವರಿಸಿತು.
ಹವಾಮಾನ ಪರಿಸ್ಥಿತಿ ಬಿಗಡಾಯಿಸಿದಾಗ ಮಾತ್ರ ನಿಯಂತ್ರಣ ಕ್ರಮ ಕೈಗೊಳ್ಳಲಾಗುತ್ತದೆ. ಇದು ಮಾಲಿನ್ಯದ ಮಟ್ಟ ಹೆಚ್ಚಲು ಕಾರಣವಾಗುತ್ತದೆ. ಉತ್ತರ ಭಾರತದ ಬಯಲು ಪ್ರದೇಶಗಳಲ್ಲಿನ ಹವಾಮಾನ ಮಾಲಿನ್ಯಕ್ಕೆ ಗಣನೀಯ ಕೊಡುಗೆ ನೀಡುತ್ತದೆ. ಏಕೆಂದರೆ ಚಳಿಗಾಲದಲ್ಲಿ ಗಾಳಿ ಮಂದಗೊಳ್ಳಲಿದ್ದು ಇದರಿಂದ ಮಾಲಿನ್ಯಕಾರಕಗಳು ಚದುರಿಹೋಗುವುದಿಲ್ಲ. ಗಾಳಿಯ ಗುಣಮಟ್ಟ ಸುಧಾರಿಸಲು ಕೈಗೊಂಡ ಅಂಕಿ-ಅಂಶಗಳ ಮಾದರಿ ನೀಡುವಾಗ ಈ ವಿಚಾರಗಳನ್ನು ಪರಿಗಣಿಸಬೇಕು ಎಂದು ಅದು ಹೇಳಿತು.
ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕದ ಸ್ವೀಕಾರಾರ್ಹ ಮಟ್ಟ ಯಾವುದು ಎಂಬುದನ್ನು ನಾವು ವ್ಯಾಖ್ಯಾನಿಸಬೇಕಾಗಿದೆ. ವಾಯುಗುಣಮಟ್ಟ ಅಂಕಿ ಅಂಶಗಳನ್ನು ಲೆಕ್ಕಹಾಕಲು ಸೂಪರ್ ಕಂಪ್ಯೂಟರ್ ಗಳನ್ನು ಬಳಸುವ ಅಗತ್ಯವಿದೆ ಎಂದು ನ್ಯಾ. ಚಂದ್ರಚೂಡ್ ಅಭಿಪ್ರಾಯಪಟ್ಟರು.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಗಾಳಿಯ ಗುಣಮಟ್ಟ ಸುಧಾರಿಸಲು ಕೇಂದ್ರ ಕೈಗೊಂಡಿರುವ ವಿವಿಧ ಕ್ರಮಗಳ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಿದ ಬಳಿಕ ಪೀಠ ಬರುವ ಸೋಮವಾರ ಪ್ರಕರಣದ ವಿಚಾರಣೆ ನಡೆಸುವುದಾಗಿ ತಿಳಸಿತು. ಅಲ್ಲಿಯವರೆಗೆ ಗಾಳಿಯ ಗುಣಮಟ್ಟದ ಅಂಕಿ ಅಂಶಗಳನ್ನು ಪರಿಶೀಲಿಸಬೇಕು. ಆಗ ಸುಧಾರಣೆ ಕಂಡುಬಂದರೆ ಸೋಮವಾರದ ವಿಚಾರಣೆ ವೇಳೆ ಕೆಲ ನಿಷೇಧಗಳನ್ನು ತೆಗೆದುಹಾಕಬಹುದು ಎಂದು ಹೇಳಿತು.
ಮುಖ್ಯವಾಗಿ ಪ್ರಕರಣವನ್ನು ಮುಕ್ತಾಯಗೊಳಿಸುವುದಿಲ್ಲ. ಅದರ ವಿಚಾರಣೆ ಮುಂದುವರೆಸುವುದಾಗಿ ನ್ಯಾಯಾಲಯ ತಿಳಿಸಿತು. ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ವಾಯುಮಾಲಿನ್ಯಕ್ಕೆ ಸಂಬಂಧಿಸಿದಂತೆ 17 ವರ್ಷದ ದೆಹಲಿ ವಿದ್ಯಾರ್ಥಿ ಆದಿತ್ಯ ದುಬೆ ಸಲ್ಲಿಸಿದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ.
(ಕೃಪೆ: ಬಾರ್ & ಬೆಂಚ್)