ನೋಯ್ಡಾದ 40 ಮಹಡಿಯ ವಸತಿ ಸಮುಚ್ಛಯ ಕೆಡವುವ ಆದೇಶ ಎತ್ತಿ ಹಿಡಿದ ಸುಪ್ರೀಂ

Prasthutha|

ದೆಹಲಿ: ಅಲಹಾಬಾದ್ ಹೈಕೋರ್ಟಿನ ಆದೇಶವನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟು ಮಂಗಳವಾರ ವಸತಿ ನಿಯಮಗಳನ್ನು ಮೀರಿ ಕಟ್ಟಿರುವ ಗ್ರೇಟರ್ ನೋಯ್ಡಾದ ಸೂಪರ್ ಟೆಕ್ ನವರ ಎಮರಾಲ್ಡ್ ಕೋರ್ಟ್ ಯೋಜನೆಯ 40 ಮಹಡಿಗಳ ಅವಳಿ ಗೋಪುರಗಳನ್ನು ಕೆಡವಲು ಆದೇಶಿಸಿತು.
ಜಸ್ಟಿಸ್ ಡಿ. ವೈ. ಚಂದ್ರಚೂಡ್ ಅವರಿದ್ದ ಪೀಠವು ಅದರ ಜೊತೆಗೇ 12% ಬಡ್ಡಿಯೊಂದಿಗೆ ಅದರಲ್ಲಿ ಮನೆ ಬುಕ್ ಮಾಡಿದ್ದವರ ಹಣ ಹಿಂದಿರುಗಿಸುವಂತೆಯೂ ಹೇಳಿತು. ಆ ಅವಳಿ ಗೋಪುರ ಕಟ್ಟಲು ತೊಂದರೆ ಕೊಟ್ಟಿದ್ದಕ್ಕಾಗಿ ಅಲ್ಲಿನ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಶನ್ ಗೆ ರೂ. 2 ಕೋಟಿ ಪರಿಹಾರ ನೀಡುವಂತೆಯೂ ಆಜ್ಞಾಪಿಸಿತು.
ಮೂರು ತಿಂಗಳೊಳಗೆ ನೋಯ್ಡಾ ನಿರ್ವಹಣೆಯಲ್ಲಿ ತಜ್ಞರ ಸಮ್ಮುಖದಲ್ಲಿ ಸೂಪರ್ ಟೆಕ್ ನವರು ತಮ್ಮ ವೆಚ್ಚದಲ್ಲಿಯೇ ಇದನ್ನು ಕೆಡವಬೇಕು. 915 ಫ್ಲಾಟ್ ಗಳ ಈ ಅವಳಿ ಗೋಪುರವನ್ನು ನೋಯ್ಡಾ ಪ್ರಾಧಿಕಾರದ ಸಹಕಾರದಿಂದ ಎಂದು ಹೇಳಿದ್ದರೂ ಯಾವುದೇ ನಿಯಮ ಪಾಲಿಸದೆ, ಅಲ್ಲಿನ ಈಗಿನ ವಾಸಿಗಳಿಗೆ ಬೆದರಿಕೆಯೊಡ್ಡಿ ಕಟ್ಟಲಾಗಿತ್ತು.
ಕಾನೂನು ಬಾಹಿರವಾದುದು ಈ ಕಟ್ಟುವಿಕೆಯಲ್ಲಿ ಏನೇನೂ ಇಲ್ಲ ಎಂದು ಸೂಪರ್ ಟೆಕ್ ಹೈಕೋರ್ಟಿನಲ್ಲಿ ವಾದಿಸಿತು. ನೋಯ್ಡಾ ಪ್ರಾಧಿಕಾರವು ನಿಯಮ ಪಾಲನೆ ಆಗದ್ದರ ಬಗೆಗೆ ಸಾಕ್ಷ್ಯ ಒದಗಿಸಿತು. 2014ರ ಏಪ್ರಿಲ್ 11ರಂದು ಅಲಹಾಬಾದ್ ಹೈಕೋರ್ಟು ಈ ಅವಳಿ ಸಮಚ್ಚಯ ಕೆಡವುವಂತೆ ಆಜ್ಞೆ ಮಾಡಿತ್ತು. ಸೂಪರ್ ಟೆಕ್ ಸುಪ್ರೀಂ ಕೋರ್ಟು ಮೆಟ್ಟಿಲೇರಿತ್ತು.

- Advertisement -