ನವದೆಹಲಿ: ಹನುಮ ಜಯಂತಿಯ ವೇಳೆ ಘರ್ಷಣೆ ನಡೆದ ದೆಹಲಿಯ ಜಹಾಂಗೀರ್’ಪುರದಲ್ಲಿ ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಆರಂಭಿಸಿದ್ದ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆಗೆ ಸುಪ್ರೀಂಕೋರ್ಟ್ ತಡೆ ನೀಡಿದೆ.
ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಪ್ರಾರಂಭಿಸಿರುವ ಡೆಮೋಲಿಷನ್ ಡ್ರೈವ್ ವಿರುದ್ಧ ಆದೇಶ ನೀಡಿರುವ ಪೀಠ, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದೆ. ಸುಪ್ರೀಂ ಕೋರ್ಟ್ ಹಿರಿಯ ವಕೀಲ ದುಷ್ಯಂತ್ ದವೆ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.
ಕಳೆದ ವಾರ ಕೋಮು ಹಿಂಸಾಚಾರ ನಡೆದ ಜಹಾಂಗೀರ್ ಪುರಿಯಲ್ಲಿ ನಡೆಯುತ್ತಿರುವ ಈ ಕಾರ್ಯಾಚರಣೆ ಸಂಪೂರ್ಣ ಅಕ್ರಮವಾಗಿದೆ. ನೋಟಿಸ್ ಕೂಡ ನೀಡಲ್ಲ. ಮುನ್ಸಿಪಲ್ ಕಾರ್ಪೋರೇಷನ್ ಕಾಯ್ದೆಯಡಿ ಮನವಿ ಸಲ್ಲಿಸಲು ಅವಕಾಶವಿದೆ. ನಾವು ಸುಪ್ರೀಂಕೋರ್ಟ್ ಮುಂದೆ ಅರ್ಜಿ ಸಲ್ಲಿಸಿದ್ದೇವೆ. ಅದು ಮಧ್ಯಾಹ್ನ 2 ಗಂಟೆಗೆ ವಿಚಾರಣೆಗೆ ಬರಲಿದೆ. ಆದರೆ ಅವರು ಈಗಲೇ ಕಾರ್ಯಾಚರಣೆ ಕೈಗೊಂಡಿದ್ದಾರೆ. ಆದ್ದರಿಂದ ಕಾರ್ಯಾಚರಣೆ ನಿಲ್ಲಿಸಲು ಸೂಚನೆ ನೀಡಬೇಕು ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.
ವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿಗಳು, ಯಥಾಸ್ಥಿತಿ ಕಾಪಾಡುವಂತೆ ಸೂಚಿಸಿದ್ದಾರೆ. ಅಲ್ಲದೇ ಸೂಕ್ತ ಪೀಠ ವಿಚಾರಣೆ ನಡೆಸಲಿದೆ ವಿಚಾರಣೆ ಮುಂದೂಡಿದರು.