ಬಿಡಿಎ ಅಧ್ಯಕ್ಷರಾಗಿ ಶಾಸಕರ ನೇಮಕ| ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್​

Prasthutha|

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಅಧ್ಯಕ್ಷರಾಗಿ ಯಲಹಂಕದ ಶಾಸಕ ಎಸ್.ಆರ್.ವಿಶ್ವನಾಥ್​ ಅವರನ್ನು ನೇಮಕ ಮಾಡಿರುವ ಬಗ್ಗೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟೀಸ್ ನೀಡಿದೆ.

- Advertisement -

ಬಿಡಿಎ ಅಧ್ಯಕ್ಷರಾಗಿ ಶಾಸಕರನ್ನು ನೇಮಕ ಮಾಡಿರುವ ರಾಜ್ಯ ಸರ್ಕಾರದ ಆದೇಶ ರದ್ದು ಮಾಡುವಂತೆ ಕೋರಿ ಬೆಂಗಳೂರಿನ ವಕೀಲ ಎ.ಎಸ್.ಹರೀಶ್ ಸುಪ್ರೀಂಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ಎಸ್‌ಕೆ ಕೌಲ್ ಮತ್ತು ಎಎಸ್ ಓಕಾ ಅವರಿದ್ದ ದ್ವಿಸದಸ್ಯ ಪೀಠ ಜ.9ರಂದು ಸೋಮವಾರ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಹಾಗೂ ಸರ್ಕಾರಕ್ಕೆ ನೋಟಿಸ್ ನೀಡಿದ್ದು, 6 ಆರು ವಾರದೊಳಗೆ ನೋಟಿಸ್​​ಗೆ ಉತ್ತರ ನೀಡಬೇಕೆಂದು ಆದೇಶಿಸಿ ವಿಚಾರಣೆ ಮುಂದೂಡಿದೆ.

ಬಿಡಿಎ ಅಧ್ಯಕ್ಷರು ಪೂರ್ಣಾವಧಿಗೆ ನೇಮಕವಾಗಬೇಕೆಂಬ ನಿಯಮವಿದೆ. ಶಾಸಕರಾದವರು ಬಿಡಿಎ ಪೂರ್ಣಾವಧಿ ಅಧ್ಯಕ್ಷರಾಗಲು ಸಾಧ್ಯವಿಲ್ಲ. ಹೀಗಾಗಿ ಎಸ್.ಆರ್.ವಿಶ್ವನಾಥ್ ನೇಮಕ ರದ್ದುಪಡಿಸಬೇಕು. ಹಾಗೆಯೇ, ಅವರು ಶೈಕ್ಷಣಿಕ ಅರ್ಹತೆಯನ್ನೂ ಹೊಂದಿಲ್ಲ. ಅವರು ಶಾಸಕರಾಗಿಯೂ, ಬಿಡಿಎ ಅಧ್ಯಕ್ಷರಾಗಿಯೂ ವೇತನ ಮತ್ತು ಭತ್ಯೆ ಪಡೆಯುತ್ತಿದ್ದಾರೆ. ಒಬ್ಬ ವ್ಯಕ್ತಿಯು ಸಾರ್ವಜನಿಕ ಹಣದಿಂದ ಎರಡು ಹುದ್ದೆಗಳಿಗೆ ಪ್ರತ್ಯೇಕ ವೇತನ ಹಾಗೂ ಭತ್ಯೆ ಪಡೆಯುವಂತಿಲ್ಲ. ಹಾಗಾಗಿ ಎಸ್‌.ಆರ್‌. ವಿಶ್ವನಾಥ್‌ ನೇಮಕ ಆದೇಶವನ್ನು ರದ್ದುಪಡಿಸಬೇಕು ಎಂದು ಅರ್ಜಿದಾರರ ಪರ ವಾದ ಮಂಡಿಸಿದ ಎ.ಎಸ್.ಹರೀಶ್ ಹೇಳಿದರು.

- Advertisement -

ಅರ್ಜಿಯನ್ನು ವಜಾಗೊಳಿಸಿದ್ದ ಹೈಕೋರ್ಟ್

ಸಂವಿಧಾನದ ಪರಿಚ್ಛೇದ 191(1) (ಎ) ಪ್ರಕಾರ ಸಂಸದರು ಹಾಗೂ ಶಾಸಕರಾಗಿರುವವರು ಕೇಂದ್ರ ಅಥವಾ ರಾಜ್ಯ ಸರ್ಕಾರದಲ್ಲಿ ಯಾವುದೇ ಲಾಭದಾಯಕ ಹುದ್ದೆ ಹೊಂದುವಂತಿಲ್ಲ. ಒಂದು ವೇಳೆ ಲಾಭದಾಯಕ ಹುದ್ದೆ ಹೊಂದಿದ್ದರೆ ಶಾಸಕ ಅಥವಾ ಸಂಸದ ಸ್ಥಾನದಿಂದ ಅನರ್ಹರಾಗುತ್ತಾರೆ ಎಂದು ಹೇಳುತ್ತದೆ. ಆದರೆ ಎಸ್.ಆರ್.ವಿಶ್ವನಾಥ್ ಶಾಸಕರಾಗಿ ಆಯ್ಕೆಯಾದ ಬಳಿಕ ಬಿಡಿಎ ಅಧ್ಯಕ್ಷರೂ ಆಗಿ ನೇಮಕವಾಗಿದ್ದಾರೆ ಹೀಗಾಗಿ ಅವರ ನೇಮಕವನ್ನು ರದ್ದು ಮಾಡಬೇಕೆಂದು ಈ ಹಿಂದೆ ಎ.ಎಸ್.ಹರೀಶ್ ಹೈಕೋರ್ಟ್​​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.  ಅರ್ಜಿ ವಿಚಾರಣೆಯನ್ನು ನಡೆಸಿದ್ದ ಹೈಕೋರ್ಟ್, ಶಾಸಕರ ನೇಮಕ ರದ್ದುಪಡಿಸಬೇಕೆಂದು ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿತ್ತು.



Join Whatsapp