ಭೋಪಾಲ್: ಮಧ್ಯಪ್ರದೇಶದಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇತರೆ ಹಿಂದುಳಿದ ವರ್ಗ (ಒಬಿಸಿ) ಗಳಿಗೆ ಮೀಸಲಾತಿ ನೀಡಲು ಸರ್ಕಾರಕ್ಕೆ ಸುಪ್ರೀಮ್ ಕೋರ್ಟ್ ಬುಧವಾರ ಅನುಮತಿ ನೀಡಿದೆ.
ಹಿಂದುಳಿದ ವರ್ಗ ಕಲ್ಯಾಣ ಆಯೋಗದ ವರದಿಯನ್ನು ಒಪ್ಪಿಕೊಂಡಿರುವ ಸುಪ್ರೀಮ್ ಕೋರ್ಟ್, ಒಂದು ವಾರದೊಳಗೆ ಚುನಾವಣೆಯನ್ನು ಘೋಷಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಸೂಚಿಸಿದೆ. ಈ ಹಿಂದೆ ಹಿಂದುಳಿದ ವರ್ಗಗಳ ಕಲ್ಯಾಣ ಆಯೋಗವು ತನ್ನ ವರದಿಯನ್ನು ಮಂಡಿಸಿದ್ದು, ಅದರಲ್ಲಿ ತ್ರಿವಳಿ ಹಂತದ ಪರಿಶೀಲನಾ ಮಾದರಿ ಅನುಸರಿಸಲಾಗಿದೆ ಎಂದು ತಿಳಿಸಿದೆ.
ಸುಪ್ರೀಮ್ ಕೋರ್ಟ್ ನ ಈ ಆದೇಶದನ್ವಯ ಸದ್ಯ ಮಧ್ಯಪ್ರದೇಶದಲ್ಲಿ ಮೀಸಲಾತಿಯ ಸಮಸ್ಯೆಯಿಂದಾಗಿ ಎರಡು ವರ್ಷಗಳಿಂದ ಬಾಕಿಯಾಗಿದ್ದ ಸ್ಥಳೀಯ ಸಂಸ್ಥೆ ಚುನಾವಣೆಗೆ ಚಾಲನೆ ದೊರೆಯಲಿದೆ ಮತ್ತು ಪ್ರಸ್ತುತ 23,000 ಕ್ಕೂ ಹೆಚ್ಚು ಸ್ಥಳೀಯ ಸಂಸ್ಥೆ ಸ್ಥಾನಗಳು ಖಾಲಿ ಇವೆ.