ಲಕ್ನೋ: ಲಖಿಂಪುರ ಹಿಂಸಾಚಾರ ಪ್ರಕರಣದ ತನಿಖೆ ನಡೆಯುತ್ತಿರುವ ರಾಜ್ಯ ಸರ್ಕಾರದ ರೀತಿಯನ್ನು ನೋಡಿದರೆ ಅಧಿಕಾರಿಗಳು ಈ ಪ್ರಕರಣದ ಕುರಿತು ಗಂಭೀರವಾಗಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ, “ಬಾಯಿ ಮಾತಿನಲ್ಲಿ ಮಾತ್ರ ಕಠಿಣ ಕ್ರಮದ ಬಗ್ಗೆ ಮಾತನಾಡಲಾಗುತ್ತಿದೆ. ಆದರೇ ಪ್ರಕರಣವನ್ನು ಭೇದಿಸುವಲ್ಲಿ ಯಾವ ಸಂದೇಶವನ್ನು ತಾವು ಸಂದೇಶವನ್ನು ರವಾನಿಸುತ್ತಿದ್ದೀರಿ?” ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
ಲಖಿಂಪುರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಅವರ ಪುತ್ರ ಆಶಿಶ್ ಅವರನ್ನು ಬಂಧಿಸದಿರುವುದಕ್ಕೆ ಸುಪ್ರೀಂ ಕೋರ್ಟ್ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಇತರ ಪ್ರಕರಣಗಳಲ್ಲಿಯೂ ಈ ರೀತಿಯ ಅಸಡ್ಡೆ ತೋರುತ್ತೀರ ಎಂದು ಆದಿತ್ಯನಾಥ್ ಸರ್ಕಾರವನ್ನು ಪ್ರಶ್ನಿಸಿ ಸುಪ್ರೀಮ್ ಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಲಖಿಂಪುರದಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಮಂದಿಯ ಹತ್ಯೆ ನಡೆಸಿದ ಎಲ್ಲಾ ಆರೋಪಿಗಳನ್ನು ಕಾನೂನಿನ ಪರಿಮಿತಿಗೆ ಒಪ್ಪಿಸುವಂತೆ ಮುಖ್ಯ ನ್ಯಾಯಾಮೂರ್ತಿ ಎನ್.ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠ ಸರ್ಕಾರಕ್ಕೆ ಸೂಚಿಸಿದೆ.
ಹಿಂಸಾಚಾರ ಪ್ರಕರಣವನ್ನು ಸಿಬಿಐ ಗೆ ವಹಿಸುವಂತೆ ಕೋರಿ ಇಬ್ಬರು ವಕೀಲರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ವೇಳೆ ಪೀಠ ಈ ರೀತಿ ಹೇಳಿದೆ.