ನವದೆಹಲಿ: ಭಾರತದಲ್ಲಿ ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸುವ ಮತ್ತು ಭಯಭೀತಗೊಳಿಸುವ ನಡೆಯನ್ನು ತಡೆಯಲು ತುರ್ತಾಗಿ ಮಧ್ಯಸ್ಥಿಕೆ ವಹಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಮ್ ಕೋರ್ಟ್, ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಇದಕ್ಕೆ ಸಂಬಂಧಿಸಿದಂತೆ ಶಾಹೀನ್ ಅಬ್ದುಲ್ಲಾ ಅವರು ದ್ವೇಷ ಕೃತ್ಯ ಮತ್ತು ದ್ವೇಷ ಭಾಷಣಗಳ ಬಗ್ಗೆ ಸ್ವತಂತ್ರ, ವಿಶ್ವಾಸಾರ್ಹ ಮತ್ತು ನಿಷ್ಪಕ್ಷಪಾತ ತನಿಖೆಯನ್ನು ನಡೆಸುವಂತೆ ಭಾರತ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಮ್ ಕೋರ್ಟ್’ಗೆ ಅರ್ಜಿ ಸಲ್ಲಿಸಿದ್ದರು.
ಮುಸ್ಲಿಮರ ವಿರುದ್ಧ ಇಂತಹ ದ್ವೇಷದ ಅಪರಾಧ ಕೃತ್ಯದಲ್ಲಿ ತೊಡಗಿಸಿಕೊಂಡಿರುವ ಭಾಷಣಗಾರರು ಮತ್ತು ಸಂಘಟನೆಗಳ ವಿರುದ್ಧ UAPA ಕಾಯ್ದೆ ಮತ್ತು ಇತರ ಐಪಿಸಿ ಕಾಯ್ದೆ ಅಡಿಯಲ್ಲಿ ಸೂಕ್ತ ಕ್ರಮವನ್ನು ಜರುಗಿಸಲು ನಿರ್ದೇಶಿಸುವಂತೆ ಅರ್ಜಿದಾರರು ಮನವಿ ಮಾಡಿದ್ದಾರೆ.
ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಕೆ.ಎಂ ಜೋಸೆಫ್ ಅವರ ನೇತೃತ್ವದ ಪೀಠದ ಎದುರು ಬಾಕಿ ಉಳಿದಿರುವ ಅರ್ಜಿಯನ್ನು ಕೂಡ ಟ್ಯಾಗ್ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ವಿಚಾರದಲ್ಲಿ ಏನಾದರೂ ಮಾಡಬೇಕಾಗಿದೆ ಮತ್ತು ದ್ವೇಷ ಹರಡುವವರ ವಿರುದ್ಧ ಕೆಲವು ಕ್ರಮಗಳನ್ನು ಜರುಗಿಸಬೇಕು ಎಂದು ಸುಪ್ರೀಮ್ ಕೋರ್ಟ್’ನ ಹಿರಿಯ ವಕೀಲ ಕಪಿಲ್ ಸಿಬಲ್ ವಾದಿಸಿದ್ದಾರೆ.
ಈ ಮಧ್ಯೆ ಅರ್ಜಿಯಲ್ಲಿ ಉಲ್ಲೇಖಿಸಿರುವ ಅಂಶಗಳು ಅಸ್ಪಷ್ಟವಾಗಿದೆ ಎಂದು ಸುಪ್ರೀಮ್ ಕೋಟ್ ಬೊಟ್ಟು ಮಾಡಿದೆ. ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ಸಿ.ಟಿ. ರವಿಕುಮಾರ್ ಅವರನ್ನೊಳಗೊಂಡ ಪೀಠ ಎಫ್.ಐ.ಆರ್ ನಲ್ಲಿ ದಾಖಲಿಸಿದ ಅಂಶಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು ಎಂದು ತಿಳಿಸಿದೆ.