ಗೌರಿ ಲಂಕೇಶ್ ಹತ್ಯೆ ಪ್ರಕರಣ: ಆರೋಪಿಯ ವಿರುದ್ಧ ಕೋಕಾ ಕಾಯ್ದೆ ಕೈಬಿಟ್ಟಿದ್ದಕ್ಕೆ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ನೋಟಿಸ್

Prasthutha|

ವಿಚಾರಣೆ ನಡೆಸದೆ ಆರೋಪಿಗೆ ಜಾಮೀನು ನೀಡುವಂತಿಲ್ಲವೆಂದ ಸುಪ್ರೀಮ್ ಕೋರ್ಟ್
ಮೇಲ್ಮನವಿ ಸಲ್ಲಿಸುವಂತೆ ಕವಿತಾ ಲಂಕೇಶ್ ಬೊಮ್ಮಾಯಿಯನ್ನು ಭೇಟಿಯಾಗಿದ್ದರೂ ಪ್ರಯೋಜನವಾಗಿರಲಿಲ್ಲ

- Advertisement -

ಬೆಂಗಳೂರು : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮೋಹನ್ ನಾಯಕ್ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ (ಕೋಕಾ)ಯಡಿ ದಾಖಲಿಸಿದ್ದ ಆರೋಪವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದ್ದನ್ನು ಪ್ರಶ್ನಿಸಿ ಗೌರಿ ಅವರ ಸಹೋದರಿ ಕವಿತಾ ಲಂಕೇಶ್ ಸಲ್ಲಿಸಿದ್ದ ಅರ್ಜಿ ಸಂಬಂಧ ಸುಪ್ರೀಂಕೋರ್ಟ್ ಸೋಮವಾರ ಕರ್ನಾಟಕ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.


ಗೌರಿ ಲಂಕೇಶ್ ಅವರನ್ನು 2017 ರಲ್ಲಿ ಬೆಂಗಳೂರಿನಲ್ಲಿ ಗುಂಡಿಕ್ಕಿ ಹತ್ಯೆಗೈಯ್ಯಲಾಗಿತ್ತು.
ಕವಿತಾ ಲಂಕೇಶ್ ಪರ ಹಿರಿಯ ವಕೀಲರಾದ ಹುಫೆಜಾ ಅಹ್ಮದಿ ಹಾಗೂ ಅಪರ್ಣಾ ಭಟ್ ಅವರು ಸುಪ್ರೀಂ ಕೋರ್ಟ್ ಗೆ ಹಾಜರಾಗಿ, ಈ ಪ್ರಕರಣದಲ್ಲಿ ಆರನೇ ಆರೋಪಿ ಮೋಹನ್ ನಾಯಕ್ ಜಾಮೀನು ಸಿಗುವಂತಾಗಲು ಕೋಕಾ ಕಾಯ್ದೆಯ ಆರೋಪವನ್ನು ಕೈಬಿಡಲಾಗಿದೆ ಎಂದು ಪೀಠದ ಗಮನಕ್ಕೆ ತಂದರು.

- Advertisement -


ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ ಮತ್ತು ಅನಿರುದ್ಧ ಬೋಸ್ ಅವರನ್ನೊಳಗೊಂಡ ನ್ಯಾಯಪೀಠವು, ಸುಪ್ರೀಂಕೋರ್ಟ್ ಕವಿತಾ ಅವರ ಅರ್ಜಿಯ ವಿಚಾರಣೆ ನಡೆಸಿದ ಬಳಿಕವೇ ಆರೋಪಿಯ ಜಾಮೀನು ಅರ್ಜಿಯನ್ನು ಹೈಕೋರ್ಟ್ ಪರಿಗಣಿಸಬೇಕು ಎಂದು ಸೂಚಿಸಿದೆ.


ಗೌರಿ ಲಂಕೇಶ್ ಕೊಲೆ ಆರೋಪಿ ಮೋಹನ್ ನಾಯಕ್ ಮೇಲೆ ಹಾಕಲಾಗಿದ್ದ KOCCA ಕಾಯಿದೆಯನ್ನು ಕಳೆದ ಏಪ್ರಿಲ್ 23 ರಂದು ರದ್ದು ಮಾಡಲಾಗಿತ್ತು. ಇದರಿಂದಾಗಿ ಆತನಿಗೂ ಹಾಗೂ ಆರೋಪಿಗಳಿಗೆ ಸುಲಭವಾಗಿ ಜಾಮೀನು ಸಿಗುವ ಸಂಭವ ಉಂಟಾಗಿತ್ತು. ಮಾತ್ರವಲ್ಲ ಗೌರಿ ಹತ್ಯೆಯನ್ನು ಒಂದು ಸಂಘಟಿತ ಸೈದ್ಧಾಂತಿಕ ಕೊಲೆಯಾಗಿ ಪರಿಗಣಿಸದೇ ಮತ್ತೊಂದು ಕೊಲೆ ಪ್ರಕರಣವಾಗಿ ಪರಿಗಣಿಸುವ ಅಪಾಯವೂ ಎದುರಾಗಿತ್ತು.


ಹೈಕೋರ್ಟಿನ ಆದೇಶದ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವ ಪ್ರಕ್ರಿಯೆಯನ್ನು ಕರ್ನಾಟಕ ಸರ್ಕಾರವು ತುರ್ತಾಗಿ ಪ್ರಾರಂಭಿಸಬೇಕಿತ್ತು. ಆದರೆ ಸರ್ಕಾರ ಅದರ ಬಗ್ಗೆ ಯಾವುದೇ ವಿಶೇಷ ಆಸಕ್ತಿಯನ್ನು ತೋರಿಸಿರಲಿಲ್ಲ. ಈ ನಿಟ್ಟಿನಲ್ಲಿ ಕವಿತಾ ಲಂಕೇಶ್ ಅವರು ಖುದ್ದಾಗಿ ಗೃಹಮಂತ್ರಿ ಬೊಮ್ಮಾಯಿಯವರನ್ನು ಭೇಟಿ ಮಾಡಿಯೂ ಬಂದಿದ್ದರು. ಬೊಮ್ಮಾಯಿಯವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರೂ ಮೇಲ್ಮನವಿ ವಿಚಾರದಲ್ಲಿ ಯಾವುದೇ ಬೆಳವಣಿಗೆಯಾಗಿರಲಿಲ್ಲ.


ಈ ಹಿನ್ನೆಲೆಯಲ್ಲಿ ಕವಿತಾ ಲಂಕೇಶರೇ ತೀಸ್ತಾ ಸೆಟಲ್ವಾಡ್ರ ಸಲಹೆ ಮತ್ತು ಸಹಕಾರದೊಂದಿಗೆ ಸುಪ್ರೀಂಕೋರ್ಟ್ ನಲ್ಲಿ KOCCA ರದ್ದು ಪಡಿಸಿದ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಬೇಕೆಂದು ತುರ್ತು ಮನವಿ ಸಲ್ಲಿಸಿದ್ದರು. ಇಂದು ಸುಪ್ರೀಂಕೋರ್ಟ್ ಆ ಮನವಿಯನ್ನು ಪುರಸ್ಕರಿಸಿ ಕರ್ನಾಟಕ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.



Join Whatsapp