ಹೋರಾಟಗಾರ್ತಿ ಶೋಮಾ ಕಾಂತಿ ಸೇನ್‌‌ಗೆ ಸುಪ್ರೀಂ ಕೋರ್ಟ್‌ ಜಾಮೀನು

Prasthutha|

ನವದೆಹಲಿ: ಎಲ್ಗಾರ್ ಪರಿಷತ್ -ಮಾವೋವಾದಿ ಸಂಪರ್ಕಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿಸಲಾಗಿದ್ದ ಹೋರಾಟಗಾರ್ತಿ ಶೋಮಾ ಕಾಂತಿ ಸೇನ್‌‌ಗೆ ಸುಪ್ರೀಂ ಕೋರ್ಟ್‌ ಜಾಮೀನು ನೀಡಿದೆ.

- Advertisement -

ವಿಶೇಷ ಕೋರ್ಟ್‌ ಸೂಕ್ತ ಮತ್ತು ಸರಿಯಾದುದು ಎಂದು ಪರಿಗಣಿಸುವ ಷರತ್ತುಗಳಿಗೆ ಅನ್ವಯಿಸಿ ಶೋಮಾ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದು ಎಂದು ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್, ಆಗಸ್ಟೀನ್‌ ಜಾರ್ಜ್ ಮಸಿಹ್‌ ಅವರಿದ್ದ ಪೀಠವು ಆದೇಶಿಸಿದೆ.

ವಿಶೇಷ ಕೋರ್ಟ್‌ನ ಅನುಮತಿಯಿಲ್ಲದೇ ಶೋಮಾ ಅವರು ಮಹಾರಾಷ್ಟ್ರ ರಾಜ್ಯದಿಂದ ಹೊರಗೆ ಹೋಗಬಾರದು ಎಂಬುದು ಷರತ್ತಿನ ಭಾಗವಾಗಿದೆ. ಜಾಮೀನು ಅವಧಿಯಲ್ಲಿ ತಾನು ವಾಸಿಸುವ ಸ್ಥಳದ ವಿಳಾಸವನ್ನು ಎನ್‌ಐಎ ನೀಡಬೇಕು. ಈ ಅವಧಿಯಲ್ಲಿ ಒಂದು ಮೊಬೈಲ್‌ ಫೋನ್‌ ಸಂಖ್ಯೆ ಮಾತ್ರ ಬಳಸಬಹುದು, ಅದರ ಮಾಹಿತಿಯನ್ನೂ ತನಿಖಾಧಿಕಾರಿಗೆ ನೀಡಬೇಕು ಎಂದು ಪೀಠ ಸೂಚಿಸಿತು.

- Advertisement -

ಅರ್ಜಿದಾರರು ಬಳಸುವ ಸಂಖ್ಯೆಯು ಮೊಬೈಲ್‌ ಫೋನ್‌ ಜಿಪಿಎಸ್‌ ಸೌಲಭ್ಯ ಹೊಂದಿರಬೇಕು. ದಿನದ 24 ಗಂಟೆ ಸಕ್ರಿಯವಾಗಿರಬೇಕು. ಲೋಕೇಷನ್ ಸ್ಟೇಟಸ್‌ ಕಾರ್ಯಾಚರಣೆಯಲ್ಲಿರಬೇಕು. ನಿರ್ದಿಷ್ಟ ಸ್ಥಳ ತಿಳಿಯಲು ಆಗುವಂತೆ ಈ ಮೊಬೈಲ್‌ ಸಂಖ್ಯೆಯನ್ನು ತನಿಖಾಧಿಕಾರಿಯ ಮೊಬೈಲ್‌ ಸಂಖ್ಯೆ ಜೊತೆಗೆ ಜೋಡಿಸಬೇಕು. ತನ್ನ ವಾಸ ಪ್ರದೇಶದ ಠಾಣೆಗೆ ವರದಿ ಮಾಡಿಕೊಳ್ಳಬಹುದು ಎಂದು ಪೀಠ ಹೇಳಿತು.

2017ರ ಡಿಸೆಂಬರ್ 31ರಂದು ಪುಣೆಯ ವಾಡಾದಲ್ಲಿ ನಡೆದಿದ್ದ ಎಲ್ಗಾರ್ ಪರಿಷತ್‌ ಸಮ್ಮೇಳನದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದರು. ಇದರ ಪರಿಣಾಮ ಮಾರನೇ ದಿನ ನಗರ ಹೊರವಲಯದ ಕೋರೆಗಾಂವ್ -ಭೀಮಾ ಯುದ್ದ ಸ್ಮಾರಕದ ಬಳಿ ಹಿಂಸೆಗೆ ಕಾರಣವಾಗಿತ್ತು ಎಂದು ಪೊಲೀಸರು ಆರೋಪಿಸಿದ್ದು, ಈ ಪ್ರಕರಣದ ಸಂಬಂಧ ಶೋಮಾರನ್ನು ಬಂಧಿಸಲಾಗಿತ್ತು.



Join Whatsapp