ನಮದೆಹಲಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆ ತೆರವುಗೊಳಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಈ ಬಗ್ಗೆ ಅಭಿಪ್ರಾಯ ಕೇಳಿ ಶಿವಕುಮಾರ್ ಗೆ ನೋಟಿಸ್ ನೀಡಿ ಮುಂದಿನ ವಿಚಾರಣೆಯನ್ನು ನವೆಂಬರ್ 7 ಕ್ಕೆ ಮುಂದೂಡಿದೆ.
ಕರ್ನಾಟಕ ಹೈಕೋರ್ಟ್ ಜೂನ್ 12 ರ ಆದೇಶವನ್ನು ಪ್ರಶ್ನಿಸಿ ಸಿಬಿಐ ಮನವಿ ಸಲ್ಲಿಸಿತ್ತು. ಆ ಮನವಿಯ ಮೇರೆಗೆ ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಬೇಲಾ ಎಂ ತ್ರಿವೇದಿ ಅವರ ನ್ಯಾಯಪೀಠವು ಶಿವಕುಮಾರ್ ಅವರಿಗೆ ನೋಟಿಸ್ ನೀಡಿದೆ. ಈ ತಡೆಯಾಜ್ಞೆಯಿಂದಾಗಿ ಕೇಂದ್ರ ಏಜೆನ್ಸಿಯ ಹೆಚ್ಚಿನ ತನಿಖೆಯನ್ನು ನಿಲ್ಲಿಸಲಾಗಿದೆ.
ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು, ಸಿಬಿಐ ತನಿಖೆಯ ಶೇಕಡಾ 90 ರಷ್ಟು ಮುಗಿದಿದೆ. ಆದರೆ ಹೈಕೋರ್ಟ್ ಮಧ್ಯಾಂತರ ತಡೆಯಾಜ್ಞೆಯಿಂದಾಗಿ ಅದು ಮುಂದುವರಿಯುತ್ತಿಲ್ಲ ಎಂದು ಹೇಳಿದರು. ಮಧ್ಯಾಂತರ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿದ ಆದೇಶವನ್ನು ತಡೆ ಹಿಡಿಯುವಂತೆ ಅವರು ನ್ಯಾಯಪೀಠವನ್ನು ಒತ್ತಾಯಿಸಿದರು.