ಮಿದುಳು ನಿಯಂತ್ರಿಸುವ ಯಂತ್ರ ನಿಷ್ಕ್ರಿಯಗೊಳಿಸಿ ಎಂದಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

Prasthutha|

ನವದೆಹಲಿ: ಯಂತ್ರದ ಮೂಲಕ ತನ್ನ ಮಿದುಳನ್ನು ಯಾರೋ ನಿಯಂತ್ರಿಸುತ್ತಿದ್ದಾರೆ. ಆ ಯಂತ್ರವನ್ನು ನಿಷ್ಕ್ರಿಯಗೊಳಿಸಬೇಕು ಎಂದು ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

- Advertisement -


ಈ ಅರ್ಜಿಯನ್ನು ‘ವಿಲಕ್ಷಣ’ ಎಂದು ಕರೆದ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರನ್ನೊಳಗೊಂಡ ವಿಭಾಗೀಯ ಪೀಠವು, ಈ ವಿಷಯದಲ್ಲಿ ನಾವು ಹೇಗೆ ಮಧ್ಯಪ್ರವೇಶಿಸಬೇಕು ಎಂಬುದಕ್ಕೆ ಯಾವುದೇ ವ್ಯಾಪ್ತಿ ಅಥವಾ ಕಾರಣ ಕಾಣದಿರುವ ಹಿನ್ನೆಲೆಯಲ್ಲಿ ಅರ್ಜಿ ವಜಾಗೊಳಿಸುತ್ತಿರುವುದಾಗಿ ಹೇಳಿದೆ ಎಂದು ಲೈವ್ ಲಾ ವರದಿ ಮಾಡಿದೆ.


ಹೈದರಾಬಾದ್ನ ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯದಿಂದ (ಸಿಎಫ್ಎಸ್ಎಲ್) ಕೆಲವರು ಮಾನವನ ಮಿದುಳನ್ನು ಓದುವ ಯಂತ್ರವನ್ನು ಪಡೆದುಕೊಂಡಿದ್ದಾರೆ. ಅದನ್ನು ತನ್ನ ಮೇಲೆ ಬಳಸುತ್ತಿದ್ದಾರೆ ಎಂದು ಆರೋಪಿಸಿ ವ್ಯಕ್ತಿ ಆರಂಭದಲ್ಲಿ ಆಂಧ್ರಪ್ರದೇಶ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಯಂತ್ರವನ್ನು ನಿಷ್ಕ್ರಿಯಗೊಳಿಸಬೇಕು ಎಂದು ವ್ಯಕ್ತಿ ಕೋರಿದ್ದರು.

- Advertisement -


ಈ ಸಂಬಂಧ ಹೈಕೋರ್ಟ್ನಲ್ಲಿ ಕೌಂಟರ್ ಅಫಿಡವಿಟ್ ಸಲ್ಲಿಸಿದ್ದ ಸಿಎಫ್ಎಸ್ಎಲ್ ಮತ್ತು ಸಿಬಿಐ, ಅರ್ಜಿದಾರರು ಶಿಕ್ಷಕರಾಗಿದ್ದು, ಅವರು ಯಾವುದೇ ಸಮಯದಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದ ಪರೀಕ್ಷೆಗೆ ಒಳಗಾಗಿಲ್ಲ. ಹೀಗಾಗಿ, ಆ ವ್ಯಕ್ತಿಯು ಹೇಳುತ್ತಿರುವಂತೆ ಆತನ ಮೇಲೆ ಬಳಸಲಾಗಿದೆ ಎನ್ನಲಾದ ಯಂತ್ರವನ್ನು ನಿಷ್ಕ್ರಿಯಗೊಳಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ತಿಳಿಸಿದ್ದವು. ಬಳಿಕ, 2022ರ ನವೆಂಬರ್ನಲ್ಲಿ ಹೈಕೋರ್ಟ್, ಆತನ ಅರ್ಜಿಯನ್ನು ವಜಾಗೊಳಿಸಿತ್ತು.


ಬಳಿಕ ಆ ವ್ಯಕ್ತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯ ಈ ಪ್ರಕರಣವನ್ನು ಆಶ್ಚರ್ಯಕರ ಎಂದು ಪರಿಗಣಿಸಿ ವಿಚಾರಣೆಗೆ ಅಂಗೀಕರಿಸಿತ್ತು. ಬಳಿಕ, ಕೋರ್ಟ್ನ ಕಾನೂನು ಸೇವೆಗಳ ಸಮಿತಿಯು ಅರ್ಜಿದಾರರ ವಾದವನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಅವರ ಮಾತೃಭಾಷೆಯಲ್ಲೇ ಸಂವಾದವನ್ನು ಏರ್ಪಡಿಸಿತ್ತು. ಈ ವೇಳೆ, ಆ ವ್ಯಕ್ತಿ ತನ್ನ ಮಿದುಳನ್ನು ನಿಯಂತ್ರಿಸುತ್ತಿರುವ ಸಾಧನವನ್ನು ನಿಷ್ಕ್ರಿಯಗೊಳಿಸಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.



Join Whatsapp