ಸುಪ್ರೀಂಕೋರ್ಟ್| ಬಿಸಿಸಿಐ ಅರ್ಜಿ ವಿಚಾರಣೆಗೆ ತ್ರಿಸದಸ್ಯ ಪೀಠ ರಚನೆ

Prasthutha|

ನವದೆಹಲಿ: ʻಸಂವಿಧಾನದಲ್ಲಿ ಕೆಲ ತಿದ್ದುಪಡಿ ಮತ್ತು ಅಧ್ಯಕ್ಷರು ಸೇರಿದಂತೆ ಎಲ್ಲಾ ಪದಾಧಿಕಾರಿಗಳ ಕೂಲಿಂಗ್ ಆಫ್ ಅವಧಿಯನ್ನು ಹೆಚ್ಚಿಸಬೇಕುʼ ಎಂದು ಬಿಸಿಸಿಐ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್‌ ತ್ರಿಸದಸ್ಯ ಪೀಠ ರಚನೆ ಮಾಡಿದೆ.

- Advertisement -

2019ರಲ್ಲಿ ಬಿಸಿಸಿಐ ಸಲ್ಲಿಸಿರುವ ಅರ್ಜಿಗೆ ಸಂಬಂಧಪಟ್ಟಂತೆ ಆದೇಶ ಹೊರಡಿಸಿರುವ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಪೀಠ, ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠಕ್ಕೆ ಅರ್ಜಿಯ ವಿಚಾರಣೆಯನ್ನು ವರ್ಗಾಯಿಸಿದೆ.

ತಮ್ಮ ಅರ್ಜಿಯು ನ್ಯಾ. ಚಂದ್ರಚೂಡ್‌ ಅವರ ಮುಂದೆ ವಿಚಾರಣೆಗೆ ಬರಲಿದೆ ಎಂಬುದು ತಿಳಿಯುತ್ತಿದ್ದಂತೆಯೇ ಬಿಸಿಸಿಐ ಪಾಳಯದಲ್ಲಿ ಆತಂಕ ಆವರಿಸಿದೆ. ಇದಕ್ಕೆ ಕಾರಣವೂ ಇದೆ. ಈ ಹಿಂದೆ ನ್ಯಾ. ಚಂದ್ರಚೂಡ್‌ ಅವರು ನಿರ್ವಹಿಸಿದ ಎರಡು ಪ್ರಕರಣಗಳಲ್ಲಿ ಬಿಸಿಸಿಐಗೆ ಹಿನ್ನಡೆ ಉಂಟಾಗಿದೆ.

- Advertisement -

ಬಿಸಿಸಿಐನಲ್ಲಿ ಸುಧಾರಣೆಗಳನ್ನು ತರಲು ವಿಫಲರಾಗಿದ್ದಾರೆ ಎನ್ನುವ ಕಾರಣಕ್ಕೆ 2017ರ ಜನವರಿಯಲ್ಲಿ ಸುಪ್ರೀಂಕೋರ್ಟ್, ಅನುರಾಗ್ ಠಾಕೂರ್ ಮತ್ತು ಅಜಯ್ ಶಿರ್ಕೆ ಅವರನ್ನು ಬಿಸಿಸಿಐ ಅಧ್ಯಕ್ಷ ಮತ್ತು ಕಾರ್ಯದರ್ಶಿ ಸ್ಥಾನದಿಂದ ವಜಾಗೊಳಿಸಿತ್ತು. ಈ ತೀರ್ಪು ನೀಡಿದ್ದ ತ್ರಿಸದಸ್ಯ ಪೀಠದಲ್ಲಿ ಆಗಿನ ಸಿಜೆಐ ಟಿ.ಎಸ್. ಠಾಕೂರ್ ಜೊತೆಗೆ ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಮತ್ತು ನ್ಯಾ. ಚಂದ್ರಚೂಡ್‌ ಇದ್ದರು. ಅದೇ ವರ್ಷ ಬಿಸಿಸಿಐಗೆ ಆಡಳಿತಗಾರರ ಸಮಿತಿಯನ್ನು ನೇಮಿಸಿದ್ದ ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ಪೀಠದಲ್ಲೂ ಚಂದ್ರಚೂಡ್ ಸದಸ್ಯರಾಗಿದ್ದರು.

ಈ ಎರಡೂ ಅರ್ಜಿಗಳಲ್ಲೂ ನ್ಯಾ. ಚಂದ್ರಚೂಡ್‌, ಬಿಸಿಸಿಐ ನಿರೀಕ್ಷೆಗೆ ವ್ಯತಿರಿಕ್ತವಾದ ತೀರ್ಪು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಮಹತ್ವದ ಅರ್ಜಿ ವಿಚಾರಣೆಗೂ ನ್ಯಾ. ಚಂದ್ರಚೂಡ್‌ ಅವರೇ ನೇತೃತ್ವ ವಹಿಸಿರುವುದು ಕುತೂಹಲ ಮೂಡಿಸಿದೆ.

ನಿವೃತ್ತ ನ್ಯಾಯಮೂರ್ತಿ ಆರ್‌.ಎಂ. ಲೋಧಾ ಅವರ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ರಚಿಸಲಾಗಿರುವ ಬಿಸಿಸಿಐ ಸಂವಿಧಾನದ ನಿಯಮಗಳ ಪ್ರಕಾರ ಅಧ್ಯಕ್ಷ, ಕಾರ್ಯದರ್ಶಿ, ಉಪಾಧ್ಯಕ್ಷ, ಖಜಾಂಚಿ, ಜಂಟಿ ಕಾರ್ಯದರ್ಶಿಗಳು ರಾಜ್ಯ, ರಾಷ್ಟ್ರೀಯ ಕ್ರಿಕೆಟ್​ ಮಂಡಳಿಯಲ್ಲಿ ಸತತ 6 ವರ್ಷಗಳ ಕಾಲ ಕಾರ್ಯನಿರ್ವಹಿಸಿದರೆ, ಮುಂದಿನ 3 ವರ್ಷಗಳ ಕಾಲ ಬಿಸಿಸಿಐನಲ್ಲಿ ಯಾವುದೇ ಉನ್ನತ ಹುದ್ದೆಯನ್ನು ಅಲಂಕರಿಸಲು ಅವಕಾಶ ಇರುವುದಿಲ್ಲ.

ಆದರೆ ರಾಜ್ಯ ಮತ್ತು ರಾಷ್ಟ್ರೀಯ ಕ್ರಿಕೆಟ್​ ಮಂಡಳಿಗಳಿಗೆ ಒಟ್ಟಾಗಿ ನಿಗದಿಪಡಿಸಲಾಗಿರುವ ಆರು ವರ್ಷಗಳ ಅವಧಿಯನ್ನು ಪ್ರತ್ಯೇಕವಾಗಿ ಪರಿಗಣಿಸುವಂತೆ ಬಿಸಿಸಿಐ ಅರ್ಜಿಯಲ್ಲಿ ಮನವಿ ಮಾಡಿದೆ.

2019ರ ಅಕ್ಟೋಬರ್‌ 24ರಂದು ಸೌರವ್‌ ಗಂಗೂಲಿ ಮತ್ತು ಜಯ್‌ ಶಾ ಬಿಸಿಸಿಐನ ಅಧ್ಯಕ್ಷ ಮತ್ತು ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಇದಕ್ಕೂ ಮೊದಲು ಗಂಗೂಲಿ, 2014 ರಲ್ಲಿ ಕ್ರಿಕೆಟ್ ಅಸೋಸಿಯೇಷನ್ ​​ಆಫ್ ಬೆಂಗಾಲ್‌ ನ (ಸಿಎಬಿಯ) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮತ್ತೊಂದೆಡೆ, 2013ರಿಂದ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್‌ ನಲ್ಲಿ ಜಯ್ ಶಾ ಪದಾಧಿಕಾರಿಯಾಗಿದ್ದರು.

ಇವರಿಬ್ಬರ ಅಧಿಕಾರವದಿ 2020ರ ಜುಲೈಗೆ ಮುಕ್ತಾಯಗೊಂಡಿದೆ. ಆದರೆ ಸಂವಿಧಾನದಲ್ಲಿ ಕೆಲ ತಿದ್ದುಪಡಿ ಮತ್ತು ಕೂಲಿಂಗ್ ಆಫ್ ಅವಧಿಯನ್ನು ಹೆಚ್ಚಿಸಬೇಕು ಎಂದು 2019ರಲ್ಲಿ ಸಲ್ಲಿಸಲಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಳ್ಳದೇ ಇರುವುದರಿಂದ ಪ್ರಸ್ತುತ, ಇಬ್ಬರ ಅಧಿಕಾರಾವಧಿಯು ತಾಂತ್ರಿಕವಾಗಿ “ವಿಸ್ತರಣೆ”ಯಾಗಿದೆ.

ಸೆಪ್ಟೆಂಬರ್​ ನಲ್ಲಿ ಬಿಸಿಸಿಐ ವಾರ್ಷಿಕ ಮಹಾ ಸಭೆ ನಿಗದಿಯಾಗಿದ್ದು, ಇದಕ್ಕೂ ಮೊದಲು ಸುಪ್ರೀಂಕೋರ್ಟ್‌ ಬಿಸಿಸಿಐ ಅರ್ಜಿಯಲ್ಲಿ ತೀರ್ಪು ನೀಡುವ ಸಾಧ್ಯತೆ ಇದೆ.



Join Whatsapp