ಬೆಂಗಳೂರು: ಮಸ್ಜಿದ್ ಗಳ ಮೇಲೆ ಹಿಂದುತ್ವ ಪ್ರತಿಪಾದನೆಗಳ ವಿಚಾರಗಳಿಗೆ ದೇಶದ ನ್ಯಾಯಾಲಯಗಳು ತಡೆ ನೀಡಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್ ಮೆನ್ ಒ.ಎಂ.ಎ.ಸಲಾಂ ತಮ್ಮ ಹೇಳಿಕೆಯೊಂದರಲ್ಲಿ ಮನವಿ ಮಾಡಿದ್ದಾರೆ.
ಜ್ಞಾನವಾಪಿ ಮಸ್ಜಿದ್ ಪ್ರಕರಣವನ್ನು ವಾರಣಾಸಿ ಜಿಲ್ಲಾ ನ್ಯಾಯಾಧೀಶರಿಗೆ ವರ್ಗಾಯಿಸುವ ತನ್ನ ಇತ್ತೀಚಿನ ನಿರ್ಧಾರ ಮತ್ತು ಈ ಸಂದರ್ಭದಲ್ಲಿ ಮಾಡಲಾದ ಟಿಪ್ಪಣಿಯು, ಆರಾಧನಾ ಸ್ಥಳಗಳ ಕಾಯ್ದೆ 1991ಯನ್ನು ಎತ್ತಿಹಿಡಿಯುವಲ್ಲಿ ಸುಪ್ರೀಂ ಕೋರ್ಟ್ ಕೂಡ ಬದ್ಧತೆಯನ್ನು ಹೊಂದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. ವಾರಣಾಸಿ ನ್ಯಾಯಾಲಯದ ಪ್ರಕ್ರಿಯೆಗಳನ್ನು ರದ್ದುಪಡಿಸಿದುರ ವಿರುದ್ಧ ಸುಪ್ರೀಂ ಕೋರ್ಟ್ ನ ನಿರ್ಧಾರ ಮತ್ತು ಸರ್ವೆಗೆ ತಡೆ ನೀಡಲು ಅದರ ನಿರಾಕರಣೆಯು ಇದಕ್ಕೆ ಪುರಾವೆಯಾಗಿದೆ. ಉಝೂ ಖಾನಾಗೆ ಮುಸ್ಲಿಮರಿಗೆ ಹೇರಿದ ಪ್ರವೇಶ ನಿರ್ಬಂಧವನ್ನು ಪುಷ್ಟೀಕರಿಸಿರುವುದು ಅತಿಕ್ರಮಣದ ಮೊದಲ ಹಂತಕ್ಕೆ ನೀಡುವ ಒಪ್ಪಿಗೆಯಲ್ಲದೇ ಮತ್ತೇನೂ ಅಲ್ಲ ಎಂದು ಅವರು ತಿಳಿಸಿದ್ದಾರೆ.
ವಾರಣಾಸಿ ನ್ಯಾಯಾಲಯದ ಹೊರತಾಗಿ ಮಥುರಾ ನ್ಯಾಯಾಲಯವೂ ಕಳೆದ ದಿನ ಶಾಹಿ ಈದ್ಗಾ ಮಸ್ಜಿದ್ ನ ಸರ್ವೇಗಾಗಿ ಸಲ್ಲಿಸಿದ್ದ ಅರ್ಜಿಗೆ ಒಪ್ಪಿಗೆ ನೀಡಿದೆ. ನ್ಯಾಯಾಲಯದಲ್ಲಿ ನಡೆಯುತ್ತಿರುವ ಈ ಘಟನಾವಳಿಗಳು ಅರಾಧನಾಲಯಗಳ ಕಾಯ್ದೆ 1991 ಮತ್ತು ಇದರ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಉಲ್ಲಂಘನೆಯಾಗಿದೆ. ಈ ವಿವಾದವು 1968ರಲ್ಲಿ ಶಾಹಿ ಈದ್ಗಾ ಟ್ರಸ್ಟ್ ಮತ್ತು ಶ್ರೀ ಕೃಷ್ಣ ಜನ್ಮಸ್ಥಾನ್ ಸೇವಾ ಸಂಘದ ನಡುವೆ ಸೌಹಾರ್ದಯುತವಾಗಿ ಮೊದಲೇ ಬಗೆಹರಿದಿತ್ತು. ಮಾತ್ರವಲ್ಲ, ಮುಸ್ಲಿಮರು ಮತ್ತು ಹಿಂದುಗಳ ನಡುವೆ ಒಂದು ಒಪ್ಪಂದವೂ ನಡೆದಿತ್ತು. ಹಿಂದುತ್ವವಾದಿ ಶಕ್ತಿಗಳು ಅಪನಂಬಿಕೆ ಹಾಗೂ ದ್ವೇಷದ ಮೂಲಕ ಆಡಳಿತ ನಡೆಸಲು ಬಯಸುತ್ತಿದೆ ಮತ್ತು ಇದಕ್ಕಾಗಿ ಅವು ಆರಾಧನಾ ಸ್ಥಳಗಳ ಕಾಯ್ದೆ 1991 ಅನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಾ ಈ ವಿವಾದಗಳನ್ನು ಕೆದಕುವ ನಿರಂತರ ಪ್ರಯತ್ನ ಮಾಡುತ್ತಿವೆ. ಕಾಯ್ದೆಯನ್ನು ಎತ್ತಿ ಹಿಡಿಯಬೇಕಾದ ದೇಶದ ನ್ಯಾಯಾಲಯಗಳು ಮತ್ತು ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವತಃ ಉಲ್ಲಂಘಿಸುತ್ತಿರುವುದು ವಿಪರ್ಯಾಸವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಎಲ್ಲಾ ಅಪಾಯಕಾರಿ ಘಟನಾವಳಿಗಳ ಹೊರತಾಗಿಯೂ ವಿಪಕ್ಷಗಳು ವಿಶೇಷವಾಗಿ ತನ್ನ ಆಡಳಿತಾವಧಿಯಲ್ಲಿ 1991ರ ಆರಾಧನಾಲಯಗಳ ಕಾಯ್ದೆಯನ್ನು ಜಾರಿಗೊಳಿಸಿದ್ದ ಕಾಂಗ್ರೆಸ್ ನ ಮೌನವು ಅತ್ಯಂತ ಖಂಡನಾರ್ಹವಾಗಿದೆ. ಜಾತ್ಯತೀತ ಪಕ್ಷಗಳು ಮತ್ತು ನಾಗರಿಕ ಸಮುದಾಯವು ಹಿಂದುತ್ವ ಶಕ್ತಿಗಳ ಈ ಉಲ್ಲಂಘನೆಗಳ ವಿರುದ್ಧ ತಮ್ಮ ವಿರೋಧ ವ್ಯಕ್ತಪಡಿಸಲು ಇದು ಮಹತ್ವದ ಸಂದರ್ಭವಾಗಿದೆ. ಆರಾಧನಾಲಯಗಳ ಕಾಯ್ದೆ 1991 ಅನ್ನು ಉಲ್ಲೇಖಿಸುತ್ತಾ ಬಾಬರಿ ಮಸ್ಜಿದ್ ವಿವಾದವನ್ನು ಸಮಾಪ್ತಿಗೊಳಿಸಿದ್ದ ಸುಪ್ರೀಂ ಕೋರ್ಟ್, ಇದೀಗ ಮತ್ತೊಂದು ಐತಿಹಾಸಿಕ ಮಸ್ಜಿದ್ ಮೇಲೆ ದಾಳಿ ನಡೆಸಲು ಹಸಿರು ನಿಶಾನೆ ತೋರಿಸುತ್ತಿರುವಂತೆ ಕಂಡು ಬರುತ್ತಿದೆ. ಈ ವಿಚಾರವು ಅತ್ಯಂತ ಕಳವಳಕಾರಿಯಾಗಿದೆ. ಸುಪ್ರೀಂ ಕೋರ್ಟ್ ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡು ತನ್ನ ಆದೇಶವನ್ನು ಪುನರಾವಲೋಕಿಸಬೇಕಾಗಿದೆ. ಹಾಗೆಯೇ, ಅಲ್ಪಸಂಖ್ಯಾತರ ಹಕ್ಕುಗಳ ಉಲ್ಲಂಘನೆಗೆ ಹಿಂದುತ್ವ ಗುಂಪುಗಳಿಗೆ ಅನುಮತಿ ನೀಡದಿರುವುದನ್ನು ಖಾತರಿಪಡಿಸಬೇಕಾಗಿದೆ ಎಂದು ಒಎಂಎ ಸಲಾಂ ಹೇಳಿಕೆಯಲ್ಲಿ ತಿಳಿಸಿದ್ದಾರೆ.