ಹೊಸದಿಲ್ಲಿ: ಪಾಶ್ಚಿಮಾತ್ಯ ರಾಷ್ಟ್ರಗಳು ಉಕ್ರೇನ್ ಮೇಲೆ ದಾಳಿ ನಡೆಸಿರುವ ರಷ್ಯಾ ವಿರುದ್ಧ ನಿರ್ಬಂಧಗಳನ್ನು ಹೇರಿದ್ದು, ಹೀಗಾಗಿ ಆರ್ಥಿಕ, ವಾಣಿಜ್ಯ ಬಿಕ್ಕಟ್ಟು ಎದುರಿಸುತ್ತಿರುವ ರಷ್ಯಾ, ಭಾರತಕ್ಕೆ ಕಡಿಮೆ ದರದಲ್ಲಿ ಕಚ್ಚಾ ತೈಲ ಸರಬರಾಜು ಮಾಡುವ ಪ್ರಸ್ತಾಪ ಮುಂದಿಟ್ಟಿದೆ.
ಕಡಿಮೆ ದರದಲ್ಲಿ ಕಚ್ಚಾ ತೈಲ ಮತ್ತು ಇತರ ಸರಕುಗಳನ್ನು ಒದಗಿಸಲು ಮುಂದಾಗಿರುವ ರಷ್ಯಾದ ಪ್ರಸ್ತಾಪವನ್ನು ಭಾರತ ಪರಿಶೀಲಿಸಲಿದ್ದು, ರೂಪಾಯಿ ಕರೆನ್ಸಿಯಲ್ಲಿ ಹಣಕಾಸು ವರ್ಗಾವಣೆ ನಡೆಸಲೂ ರಷ್ಯಾ ಸಮ್ಮತಿಸಿದೆ ಎಂದು ಇಬ್ಬರು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತವು ರಷ್ಯಾದಿಂದ ಇದುವರೆಗೆ ಕೇವಲ ಶೇ. 2-3ರಷ್ಟು ಮಾತ್ರ ತೈಲ ಖರೀದಿಸುತ್ತಿದ್ದು, ಜಾಗತಿಕ ಮಟ್ಟದಲ್ಲಿ ದರ ಏರಿಕೆ ಆಗಿರುವುದರಿಂದ ರಷ್ಯಾದಿಂದ ಕಡಿಮೆ ದರದಲ್ಲಿ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವ ಆಯ್ಕೆಯನ್ನು ಪರಿಶೀಲಿಸುತ್ತಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯಸಭೆಯಲ್ಲಿ ಮಾತನಾಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಯ ಸಚಿವ ಹರ್ದೀಪ್ ಸಿಂಗ್ ಪುರಿ ‘ಅಮೆರಿಕ, ಬ್ರಿಟನ್ ಮೊದಲಾದ ರಾಷ್ಟ್ರಗಳಲ್ಲಿ ತೈಲ ದರ ಶೇ. 50ಕ್ಕೂ ಹೆಚ್ಚು ಏರಿಕೆಯಾಗಿದ್ದರೂ, ಭಾರತದಲ್ಲಿ ಕೋವಿಡ್ ಬಿಕ್ಕಟ್ಟಿನ ಸಂದರ್ಭ ಕೇವಲ ಶೇ. 5ರಷ್ಟು ದರ ಏರಿಕೆ ಮಾಡಲಾಗಿದೆ. ಮಹಾರಾಷ್ಟ್ರ, ಕೇರಳ ಸೇರಿದಂತೆ 9 ರಾಜ್ಯಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಇಳಿಕೆ ಮಾಡಿಲ್ಲ ಎಂದು ತಿಳಿಸಿದ್ದಾರೆ.