ಫುಟ್ಬಾಲ್ ದಂತಕಥೆ ಪೀಲೆ ದಾಖಲೆ ಮುರಿದ ಸುನಿಲ್ ಚೆಟ್ರಿ

Prasthutha|

ಸ್ಯಾಫ್ ಕಪ್ ಟೂರ್ನಿಯ ಫೈನಲ್’ ಗೆ ಭಾರತ

- Advertisement -

ಮಾಲೆ, ಮಾಲ್ಡೀವ್ಸ್; ಬ್ರೆಝಿಲ್ ರಾಷ್ಟ್ರೀಯ ತಂಡದ ಪರವಾಗಿ ಆಡುತ್ತಾ ಫುಟ್ಬಾಲ್ ದಂತಕಥೆ ಪೀಲೆ ಗಳಿಸಿದ್ದ 77 ಗೋಲಿನ ದಾಖಲೆ [ 92 ಪಂದ್ಯ] ಯನ್ನು ಮುರಿದ ಭಾರತದ ಸುನಿಲ್ ಚೆಟ್ರಿ, 79 ಗೋಲುಗಳ ಮೂಲಕ [ 124 ಪಂದ್ಯ] ಸರ್ವಕಾಲಿಕ ಗೋಲು ಗಳಿಸಿದವರ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದ್ದಾರೆ.
ಸ್ಯಾಫ್ ಕಪ್ ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ಅಮೂಲ್ಯ ಎರಡು ಗೋಲು ಗಳಿಸಿದ ಚೆಟ್ರಿ ವಿಶ್ವ ದಾಖಲೆ ವೀರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.


ಟಾಪ್ ಸ್ಕೋರರ್ ಪಟ್ಟಿಯಲ್ಲಿ ಕ್ರಿಸ್ಟಿಯಾನೋ ರೋನಾಲ್ಡೋ ಹಾಗೂ ಲಿಯೋನೆಲ್ ಮೆಸ್ಸಿ ಮಾತ್ರ ಸಕ್ರಿಯ ಆಟಗಾರರ ಪೈಕಿ ಚೆಟ್ರಿಗಿಂತಲೂ ಮುಂದಿದ್ದಾರೆ. 80 ಗೋಲು ಗಳಿಸಿರುವ ಮೆಸ್ಸಿ 5ನೇ ಸ್ಥಾನದಲ್ಲಿದ್ದಾರೆ. 115 ಗೋಲು ಗಳಿಸಿರುವ ರೊನಾಲ್ಡೊ ಪಟ್ಟಿಯಲ್ಲಿ ನಂಬರ್-1 ಆಗಿದ್ದಾರೆ.

- Advertisement -


ಸ್ಯಾಫ್ ಕಪ್ ಟೂರ್ನಿಯ ಫೈನಲ್’ಗೆ ಭಾರತ

ಭಾರತದ ಸ್ಟಾರ್ ಆಟಗಾರ ಸುನಿಲ್ ಚೆಟ್ರಿ ದ್ವಿತೀಯಾರ್ಧದಲ್ಲಿ ಗಳಿಸಿದ ಎರಡು ಗೋಲುಗಳ ನೆರವಿನಿಂದ ಭಾರತ, ಸ್ಯಾಫ್ ಕಪ್ ಟೂರ್ನಿಯಲ್ಲಿ ಫೈನಲ್ ಗೆ ಪ್ರವೇಶ ಪಡೆದಿದೆ.


ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಹಾಗೂ ಅತಿಥೇಯ ಮಾಲ್ಡೀವ್ಸ್ ವಿರುದ್ಧ 3-1 ಗೋಲುಗಳ ಅಂತರದಿಂದ ಗೆದ್ದು ಬೀಗಿದ ಭಾರತ, ದಾಖಲೆಯ 12ನೇ ಬಾರಿಗೆ ಟೂರ್ನಿಯ ಫೈನಲ್ ಗೆ ಅರ್ಹತೆ ಪಡೆಯಿತು. ಪ್ರಶಸ್ತಿ ಫೈಟ್’ನಲ್ಲಿ ಇದೇ ಮೊದಲ ಬಾರಿಗೆ ಸ್ಯಾಫ್ ಟೂರ್ನಿಯ ಫೈನಲ್ ಹಂತಕ್ಕೇರಿರುವ ನೇಪಾಳ ತಂಡವನ್ನು ಭಾರತ ಎದುರಿಸಲಿದೆ.ಸ್ಯಾಫ್ ಟೂರ್ನಿಯಲ್ಲಿ ಭಾರತ ಇದುವರೆಗೂ ದಾಖಲೆಯ 7 ಬಾರಿ ಚಾಂಪಿಯನ್ ಆಗಿದ್ದು, ಶನಿವಾರ ನಡೆಯಲಿರುವ ಫೈನಲ್ ಫೈಟ್ ನಲ್ಲಿ ಮತ್ತೊಮ್ಮೆ ಚಾಂಪಿಯನ್ ಆಗುವ ಸಾಧ್ಯತೆ ಇದೆ.


ಮಾಲ್ಡೀವ್ಸ್ ವಿರುದ್ಧದ ಪಂದ್ಯದಲ್ಲಿ ನಿರ್ಣಾಯಕ ಪಂದ್ಯದ 33ನೇ ನಿಮಿಷದಲ್ಲಿ ಮನ್ವೀರ್ ಸಿಂಗ್ ಗೋಲಿನ ಖಾತೆ ತೆರೆದರು.ಆದರೆ ಹಿನ್ನಡೆಯಿಂದ ಹೋರಾಟ ನಡೆಸಿಸ ಮಾಲ್ಡೀವ್ಸ್, ಅಲಿ ಅಶ್ವಾಫ್ ಮೂಲಕ 45ನೇ ನಿಮಿಷದಲ್ಲಿ ಸಮಬಲದ ಗೋಲು ದಾಖಲಿಸಿದರು. ಹೀಗಾಗಿ ಪಂದ್ಯದ ಮೊದಲಾರ್ಧ ಸಮಬಲದಲ್ಲಿ ಕೊನೆಗೊಂಡಿತ್ತು.

ದ್ವಿತಿಯಾರ್ಧದ 62 ಹಾಗೂ 71ನೇ ನಿಮಿಷದಲ್ಲಿ ಆಕರ್ಷಕ ಗೋಲು ಸಿಡಿಸಿದ ಭಾರತ ತಂಡದ ನಾಯಕ ಸುನಿಲ್ ಚೆಟ್ರಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.ಸ್ಯಾಫ್ ಟೂರ್ನಿಯಲ್ಲಿ ಭಾರತ ಆಡಿದ 4 ಪಂದ್ಯಗಳಲ್ಲಿ 2 ಗೆಲುವು ಹಾಗೂ 2 ಡ್ರಾದೊಂದಿಗೆ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಿಯಾಗಿ ಫೈನಲ್ಗೆ ಲಗ್ಗೆಯಿಟ್ಟಿದೆ.

Join Whatsapp