ಬೆಂಗಳೂರು: ಶಾಲೆಗಳಿಗೆ ಏಪ್ರಿಲ್ 10 ರಿಂದ ಮೇ 15 ರವರೆಗೆ ಬೇಸಿಗೆ ರಜೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಘೋಷಿಸಿದೆ. ಕಳೆದ ಮೂರು ವರ್ಷಗಳಿಂದ ಶೈಕ್ಷಣಿಕ ಸಾಲಿನಲ್ಲಿ ಭೌತಿಕವಾಗಿ ತರಗತಿಗಳು ನಡೆಯದೇ ಇರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಆಗಿರುವ ಕಲಿಕಾ ಕೊರತೆಯನ್ನು ಸರಿದೂಗಿಸಲು ಬರುವ ಶೈಕ್ಷಣಿಕ ವರ್ಷ ತರಗತಿಗಳನ್ನು ನಡೆಸಲು ಅದು ತೀರ್ಮಾನಿಸಿದೆ.
ಈ ಕುರಿತು ಅಧಿಕೃತ ಆದೇಶ ಹೊರಡಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಎಲ್ಲ ಪ್ರೌಢಶಿಕ್ಷಣ ತರಗತಿಗಳನ್ನು ಮೇ 16 ರಿಂದ ಆರಂಭಿಸಲು ನಿರ್ಧರಿಸಿದೆ. ಒಂದರಿಂದ ಎಂಟನೇ ತರಗತಿಗಳಿಗೆ ಮಾರ್ಚ್ 24 ರಿಂದ ಏಪ್ರಿಲ್ 4 ರವರೆಗೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಎಲ್ಲ ಪರೀಕ್ಷೆ ಪ್ರಕ್ರಿಯೆಗಳು ಏಪ್ರಿಲ್ 9 ರ ಒಳಗೆ ಪೂರ್ಣಗೊಳಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಎಲ್ಲ ಶಾಲೆಗಳಿಗೆ ನಿರ್ದೇಶಿಸಿದೆ.