ಮಂಡ್ಯ ; ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಹಳೆ ಮೈಸೂರನ್ನ ಕಬ್ಜ ಮಾಡಬೇಕು, ಒಕ್ಕಲಿಗರ ಕೋಟೆ ಮೇಲೆ ಕಮಲ ಪತಾಕೆ ಹಾರಿಸಬೇಕೆಂದು ಪಣತೊಟ್ಟು ದಕ್ಷಿಣ ದಂಡಯಾತ್ರೆಗೆ ಚಾಲನೆ ನೀಡಿದ್ದ ಬಿಜೆಪಿಗರ ಲೆಕ್ಕಾಚಾರ ತಲೆಕೆಳಗಾಗಿದೆ.
ಮಂಡ್ಯದ 7 ವಿಧಾನಸಭಾ ಕ್ಷೇತ್ರದ ಪೈಕಿ 5 ಕ್ಷೇತ್ರವನ್ನ ಕಾಂಗ್ರೆಸ್ ಕಬ್ಜ ಮಾಡಿದ್ರೆ, ಮೇಲುಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ರೈತ ಸಂಘದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಗೆದ್ದು ಬೀಗಿದ್ದಾರೆ. ಆದ್ರೆ ಈಗ ದರ್ಶನ್ ಗೆಲುವಿಗೆ ಪರೋಕ್ಷವಾಗಿ ಸಂಸದೆ ಸುಮಲತಾ ಕಾರಣ ಎಂಬ ಆರೋಪ ಕೇಳಿ ಬರುತ್ತಿದೆ. ಅದರಲ್ಲೂ ಈ ಆರೋಪವನ್ನ ಸ್ವತಃ ಬಿಜೆಪಿ ಅಭ್ಯರ್ಥಿಯೇ ಮಾಡುತ್ತಿರುವುದು, ಮಂಡ್ಯ ಕದನಕಣ ಮತ್ತೆ ರಣಾಂಗಣವಾಗಿದೆ.
ದರ್ಶನ್ ಜೊತೆ ಸುಮಾ ಮ್ಯಾಚ್ ಫಿಕ್ಸಿಂಗ್ ಆರೋಪ ಸುಮಲತಾ ವರ್ಸಸ್ ದಳಪತಿಗಳ ದಂಗಲ್ ನಿನ್ನೆ ಮೊನ್ನೆಯದಲ್ಲ. 2019ರ ಲೋಕಸಭಾ ಸಂಗ್ರಾಮದ ವೇಳೆ ಶುರುವಾದ ಈ ಸಮರ ಇನ್ನೂ ಸಹ ನಿಂತಿಲ್ಲ.
ಮಂಡ್ಯದ ಜೆಡಿಎಸ್ ಶಾಸಕರ ವಿರುದ್ಧ ಬಹಿರಂಗವಾಗಿಯೇ ಸಿಡಿದೆದ್ದಿದ್ದ ಸುಮಲತಾ, ಅಕ್ರಮ ಗಣಿಗಾರಿಕೆ ಮೂಲಕ ಮಾಜಿ ಶಾಸಕ ಪುಟ್ಟರಾಜು ವಿರುದ್ಧ ಸಮರ ಸಹ ಸಾರಿದ್ದರು. ಈಗ ಸುಮಲತಾರ ಹಳೆ ಸೇಡು ಮತ್ತೆ ಚರ್ಚೆಗೆ ಬಂದಿದೆ.
ಮೇಲುಕೋಟೆಯಲ್ಲಿ ಪುಟ್ಟರಾಜುರನ್ನ ಸೋಲಿಸಲು ಸುಮಲತಾ ರೈತ ಸಂಘದ ಅಭ್ಯರ್ಥಿ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿ ಕೊಂಡಿದ್ರು. ಈ ಕಾರಣಕ್ಕಾಗಿಯೇ ಬಿಜೆಪಿ ಅಭ್ಯರ್ಥಿ ಪರ ಒಂದು ದಿನವೂ ಪ್ರಚಾರಕ್ಕೆ ಬರಲಿಲ್ಲ, ಸುಮಾ ಸೇಡಿನಿಂದ ಬಿಜೆಪಿಗೆ ನಷ್ಟವಾಯ್ತು ಎಂದು ಮೇಲುಕೋಟೆ ಪಾರಾಜಿತ ಬಿಜೆಪಿ ಅಭ್ಯರ್ಥಿ, ಇಂದ್ರೇಶ್ ಹೊಸ ಬಾಂಬ್ ಸಿಡಿಸಿದ್ದಾರೆ.
ರೆಬೆಲ್ ಲೇಡಿಯ ವಿರುದ್ದ ಡಾ. ಇಂದ್ರೇಶ್ ಆರೋಪ ಮಾಡುತ್ತಿದ್ದಂತೆಯೇ ಸುಮಲತಾ ಆಪ್ತರು ಎಚ್ಚೆತ್ತುಕೊಂಡು, ಸುಮಾಲತಾ ಎಲ್ಲೂ ದರ್ಶನ್ ಪರ ಪ್ರಚಾರ ಮಾಡಿಲ್ಲ. ಒಂದು ವೇಳೆ ಸುಮಾಲತ ಪ್ರಚಾರ ಮಾಡಿದ್ರೆ ಇನ್ನೂ 15 ಸಾವಿರ ಹೆಚ್ಚು ಲೀಡ್ನಿಂದ ದರ್ಶನ್ ಗೆಲ್ಲುತ್ತಿದ್ದರು ಎಂದು ತಿರುಗೇಟು ನೀಡಿದ್ದಾರೆ.