ಆಲಪ್ಪುಝ: ಯುವ ಕಾಂಗ್ರೆಸ್ ಕಾರ್ಯಕರ್ತರ ತೀವ್ರ ಪ್ರತಿಭಟನೆಯ ನಡುವೆಯೇ ವಿವಾದಿತ ಐಎಎಸ್ ಅಧಿಕಾರಿ ಶ್ರೀರಾಂ ವೆಂಕಿಟರಾಮನ್ ಆಲಪ್ಪುಝ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಯುವ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಬಾವುಟದೊಂದಿದೆ ಪ್ರತಿಭಟನೆ ನಡೆಸಿದ್ದು, ಶ್ರೀರಾಂ ವೆಂಕಿಟರಾಮನ್ ಸರಕಾರೀ ಕಾರಿನಲ್ಲಿ ಆಗಮಿಸಿದಾಗ ಮುಂದೆ ನಿಂತು ತಡೆಯಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ಕಾರ್ಯಕರ್ತರನ್ನು ತಡೆದಿದ್ದು, ಪ್ರತಿಭಟನೆಯ ನಡುವೆಯೇ ಕಚೇರಿ ಪ್ರವೇಶಿಸಿದ ಶ್ರೀರಾಂ ವೆಂಕಿಟರಾಮನ್ ಅಧಿಕಾರ ಸ್ವೀಕರಿಸಿಕೊಂಡರು.
ಈ ನಡುವೆ ಪತ್ರಕರ್ತನ ಸಾವಿಗೆ ಕಾರಣವಾದ ಅಪಘಾತದ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ ‘ಈ ಬಗ್ಗೆ ನಾನು ಏನೂ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದಿದ್ದಾರೆ.
ಘಟನೆ ಹಿನ್ನೆಲೆ:
2019ರ ಆಗಸ್ಟ್ ಮೂರರಂದು ಮಧ್ಯರಾತ್ರಿ 1 ಗಂಟೆಯ ವೇಳೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಕಾರು ಓಡಿಸುತ್ತಾ ಬಂದಿದ್ದ ಐಎಎಸ್ ಅಧಿಕಾರಿ ಶ್ರೀರಾಂ ವೆಂಕಿಟರಾಮನ್ ಮ್ಯೂಸಿಯಂ ರಸ್ತೆಯಲ್ಲಿ ಕೆಲಸ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಪತ್ರಕರ್ತ ಕೆ.ಎಂ ಬಶೀರ್ ಅವರಿಗೆ ಢಿಕ್ಕಿ ಹೊಡೆದಿದ್ದು, ಡಿಕ್ಕಿಯಾದ ರಭಸಕ್ಕೆ ಬಶೀರ್ ಸ್ಥಳದಲ್ಲೇ ಮೃತಪಟ್ಟಿದ್ದರು.
35 ವರ್ಷದ ಬಶೀರ್ ಎಸ್ಸೆಸ್ಸೆಫ್ ಮುಖವಾಣಿ ಸಿರಾಜ್ ದಿನ ಪ್ರತಿಕೆಯ ತಿರುವನಂತಪುರಂ ಬ್ಯೂರೋ ಚೀಫ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಘಟನೆ ಹಿನ್ನೆಲೆಯಲ್ಲಿ ಶ್ರೀರಾಂ ವೆಂಕಿಟರಾಮನ್ ನನ್ನು ಅಮಾನತು ಮಾಡಲಾಗಿತ್ತು.
ಆದರೆ ಅವರನ್ನು ಸರಕಾರ ಆಲಪ್ಪುಝ ಜಿಲ್ಲಾಧಿಕಾರಿ ಯಾಗಿ ನೇಮಕ ಮಾಡಿದ್ದು, ಹಲವರ ಆಕ್ರೋಶಕ್ಕೆ ಕಾರಣವಾಗಿತ್ತು.