ಸುಲ್ಲಿ ಡೀಲ್ಸ್: ಆರೋಪಿಗಳ ವಿರುದ್ಧ ಕ್ರಮ ಜರುಗಿಸಲು ಲೆಫ್ಟಿನೆಂಟ್ ಗವರ್ನರ್ ಒಪ್ಪಿಗೆ

Prasthutha|

ನವದೆಹಲಿ: ಮುಸ್ಲಿಂ ಮಹಿಳೆಯರನ್ನು ಆನ್ಲೈನ್ ನಲ್ಲಿ ಹರಾಜಿಗಿಟ್ಟು ಮಾನಹಾನಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ “ಸುಲ್ಲಿ ಡೀಲ್ಸ್” ಆ್ಯಪ್ ನ ಪ್ರಮುಖ ಆರೋಪಿ ಓಂಕಾರೇಶ್ವರ್ ಠಾಕೂರ್ ನನ್ನು ವಿಚಾರಣೆಗೆ ಒಳಪಡಿಸಲು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅನುಮತಿ ನೀಡಿದ್ದಾರೆ.

- Advertisement -

ಪೊಲೀಸ್ ಅಧಿಕಾರಿಗಳ ಪ್ರಕಾರ, ಠಾಕೂರ್ (26) ವಿರುದ್ಧ ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್’ಪಿಸಿ) ಸೆಕ್ಷನ್ 196ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು, ಇದು ರಾಜ್ಯದ ವಿರುದ್ಧದ ಅಪರಾಧಗಳಿಗಾಗಿ ಮತ್ತು ಅಂತಹ ಅಪರಾಧವನ್ನು ಮಾಡಲು ಕ್ರಿಮಿನಲ್ ಪಿತೂರಿಗಾಗಿ ಪ್ರಾಸಿಕ್ಯೂಷನ್’ಗೆ ಸಂಬಂಧಿಸಿದೆ. ಸಿಆರ್’ಪಿಸಿ ಸೆಕ್ಷನ್ 196ರ ಅಡಿಯಲ್ಲಿ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲು ಪೊಲೀಸರಿಗೆ ಲೆಫ್ಟಿನೆಂಟ್ ಗವರ್ನರ್ ಅವರ ಅನುಮತಿಯ ಅಗತ್ಯವಿದೆ ಎಂದು ಅವರು ಹೇಳಿದರು.
ಮಧ್ಯಪ್ರದೇಶದ ಇಂದೋರ್ ನ ಐಪಿಎಸ್ ಅಕಾಡೆಮಿಯಿಂದ ಬ್ಯಾಚುಲರ್ಸ್ ಇನ್ ಕಂಪ್ಯೂಟರ್ ಅಪ್ಲಿಕೇಷನ್ಸ್ (ಬಿಸಿಎ) ಅಧ್ಯಯನ ಮಾಡಿರುವ ಠಾಕೂರ್, ಸುಲ್ಲಿ ಡೀಲ್ಸ್ ಅಪ್ಲಿಕೇಶನ್ ಮತ್ತು ಸುಲ್ಲಿ ಡೀಲ್ಸ್ ಟ್ವಿಟ್ಟರ್ ಹ್ಯಾಂಡಲ್ ಅನ್ನು ರಚಿಸಿದ್ದರು, ಅದು ಮುಸ್ಲಿಂ ಮಹಿಳೆಯರನ್ನು ಮತ್ತು ಸಮುದಾಯವನ್ನು ಅವಮಾನಿಸುವ ಉದ್ದೇಶದಿಂದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ “ಹರಾಜು” ಮಾಡಿತು ಎಂದು ಆರೋಪಿಸಲಾಗಿದೆ. ಅಲ್ಲದೆ ಆ್ಯಪ್ ಮತ್ತು ಟ್ವಿಟ್ಟರ್ ಹ್ಯಾಂಡಲ್ ನೂರಾರು ಮುಸ್ಲಿಂ ಮಹಿಳೆಯರನ್ನು ಅವರ ಅನುಮತಿಯಿಲ್ಲದೆ ಛಾಯಾಚಿತ್ರಗಳೊಂದಿಗೆ ಅವರನ್ನು “ಹರಾಜಿಗೆ” ಹಾಕಲಾಗಿತ್ತು.

ಠಾಕೂರ್ ಬಂಧನದ ನಂತರ, ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಕೆಪಿಎಸ್ ಮಲ್ಹೋತ್ರಾ ಅವರು ಆರೋಪಿಯು ತಾನು ಟ್ವಿಟ್ಟರ್’ನಲ್ಲಿ ಒಂದು ಗುಂಪಿನ ಸದಸ್ಯನೆಂದು ಒಪ್ಪಿಕೊಂಡಿದ್ದಾನೆ ಮತ್ತು ಮುಸ್ಲಿಂ ಮಹಿಳೆಯರನ್ನು ಅವಮಾನಿಸುವ ಉದ್ದೇಶದಿಂದ ಅಭಿವೃದ್ದಿಪಡಿಸಿದ್ದೇನೆ ಎಂದು ಹೇಳಿದ್ದಾನೆ. ಅಲ್ಲದೆ ಈತನು ಇದೇ ರೀತಿಯ ಮತ್ತೊಂದು ಆ್ಯಪ್, ಗಿಟ್ ಹಬ್ ಕೋಡ್ ನ್ನು ಅಭಿವೃದ್ಧಿಪಡಿಸಿದ್ದನು.



Join Whatsapp