ಮುಂಬೈ: ಲೇಖಕಿ, ಇನ್ಫೋಸಿಸ್ ಸಹ-ಸಂಸ್ಥಾಪಕಿ ಸುಧಾ ಮೂರ್ತಿ ಅವರು ಶಿವ ಪ್ರತಿಷ್ಠಾನದ ಸ್ಥಾಪಕ ಸಾಂಬಾಜಿ ರಾವ್ ಭಿಡೆ ಅವರನ್ನು ಭೇಟಿಯಾಗಿ, ಕಾಲಿಗೆ ಎರಗಿ ಆಶೀರ್ವಾದ ಪಡೆದಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸುಧಾ ಮೂರ್ತಿ ಸಾಂಬಾಜಿ ರಾವ್ ಭಿಡೆ ಅವರ ಕಾಲಿಗೆರಗಿ ಆಶೀರ್ವಾದ ಕೋರಿದ್ದಾರೆ.
ಸಾಂಬಾಜಿ ರಾವ್ ಭಿಡೆ 2018 ಜನವರಿ 1 ರಂದು ನಡೆದಿದ್ದ ಭೀಮಾ ಕೊರೆಗಾಂವ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ. ಅಲ್ಲದೆ, ಕೆಲ ದಿನಗಳ ಹಿಂದೆ ಮಹಿಳಾ ವರದಿಗಾರ್ತಿಯೊಬ್ಬರು ಬಿಂದಿ ಧರಿಸಿಲ್ಲ ಎಂಬ ಕಾರಣಕ್ಕೆ ಅವರೊಂದಿಗೆ ಮಾತನಾಡಲು ನಿರಾಕರಿಸಿ ವಿಧವೆ ಎಂದು ಅವಮಾನಿಸಿ ವಿವಾದಕ್ಕೆ ಕಾರಣರಾಗಿದ್ದರು.
ಸುಧಾಮೂರ್ತಿಯ ನಡೆಗೆ ಪ್ರತಿಕ್ರಿಯಿಸಿರುವ ಪತ್ರಕರ್ತೆ ಮಾನ್ಸಿ ದೇಶಪಾಂಡೆ ಎಂಬವರು, ಕೆಲ ದಿನಗಳ ಹಿಂದೆ ಮಹಿಳಾ ವರದಿಗಾರ್ತಿಯೊಬ್ಬರು ಬಿಂದಿ ಧರಿಸಿಲ್ಲ ಎಂಬ ಕಾರಣಕ್ಕೆ ಅವರೊಂದಿಗೆ ಮಾತನಾಡಲು ನಿರಾಕರಿಸಿದ್ದು ಇದೇ ವ್ಯಕ್ತಿ… ಮತ್ತು ಈ ಚಿತ್ರವೊಂದರಲ್ಲಿ ಸುಧಾ ಮೂರ್ತಿ ಅವರ ಪಾದಗಳನ್ನು ಸ್ಪರ್ಶಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಎಎಪಿ ನಾಯಕಿ ಪ್ರೀತಿ ಶರ್ಮಾ ಮೆನನ್, ಸುಧಾ ಮೂರ್ತಿಯಂತಹವರು ಭಿಡೆಯಂತಹ ಧರ್ಮಾಂಧರನ್ನು ಭೇಟಿಯಾಗುವುದರ ಮೂಲಕ ತಮ್ಮ ನಿಜವಾದ ಬಣ್ಣವನ್ನು ಬಹಿರಂಗಪಡಿಸಿದ್ದಾರೆ ಎಂದು ಹೇಳಿದ್ದಾರೆ.