ನವದೆಹಲಿ: ಹಲ್ದಿರಾಮ್ಸ್ ಉತ್ಪನ್ನದ ‘ಫಲ್ಹಾರಿ ಮಿಕ್ಚರ್’ ಪ್ಯಾಕೇಟ್ ಮೇಲೆ ಉರ್ದು ಪದ ಏಕೆ ಬಳಸಿದ್ದೀರಿ ಎಂದು ಹಲ್ದಿರಾಮ್ಸ್ ಉದ್ಯೋಗಿಯ ಬಳಿ ಖ್ಯಾತೆ ತೆಗೆದ ಸುದರ್ಶನ್ ಟಿವಿಯ ಪತ್ರಕರ್ತೆಯ ವೀಡಿಯೋ ವೈರಲ್ ಆಗಿದೆ. ಪತ್ರಕರ್ತೆಯ ಬೇಜವಾಬ್ದಾರಿ ಪ್ರಶ್ನೆಗೆ ಸಖತ್ ಕ್ಲಾಸ್ ತೆಗೆದುಕೊಂಡಿರುವ ಮಳಿಗೆಯ ಉದ್ಯೋಗಸ್ಥೆ, ನಿಮಗೆ ಇಲ್ಲಿ ತಿಂಡಿ ಬೇಕಾದರೆ ತೆಗೆದುಕೊಳ್ಳಬಹುದು, ಇಲ್ಲದಿದ್ದರೆ ಹೊರ ನಡೆಯಬಹುದು ಎಂದು ಖಡಕ್ ಆಗಿ ತಿರುಗೇಟು ನೀಡಿದ್ದಾಳೆ.
ಸುದರ್ಶನ್ ಟಿವಿಯ ಪತ್ರಕರ್ತೆ, ತಿಂಡಿ ಪ್ಯಾಕೆಟ್ ಗಳ ಮೇಲೆ ಉರ್ದು ಏಕೆ ಬರೆದಿದ್ದೀರಿ, ಇದರ ಹಿಂದಿರುವ ಕಾರಣವೇನು ಎಂದು ಸುದ್ದಿ ಬಳಸಿ ಉದ್ಯೋಗಿಯ ಬಳಿ ರೇಗಾಡಿದ್ದಾಳೆ, ಇದಕ್ಕೆ ಉತ್ತರ ನೀಡಿದ ಉದ್ಯೋಗಿ ನಮ್ಮಲ್ಲಿ ಎಲ್ಲಾ ಭಾಷೆಯ ಗ್ರಾಹಕರು ಬರುತ್ತಾರೆ. ಇಂಗ್ಲಿಷಲ್ಲೂ, ಹಿಂದಿಯಲ್ಲೂ, ಉರ್ದುವಿನಲ್ಲೂ ಬರೆಯಲಾಗಿದೆ. ನಿಮ್ಮ ವಾದವನ್ನು ಆಲಿಸುವುದಿಲ್ಲ, ನೀವು ಇಲ್ಲಿಂದ ಹೊರಹೋಗಿ ಎಂದು ಹೇಳಿದ್ದಾರೆ.
ನವರಾತ್ರಿ ವೇಳೆ ಉರ್ದುವಿನಲ್ಲಿ ಬರೆಯುವ ಮೂಲಕ ಹಿಂದೂಗಳಿಗೆ ಅವಮಾನ ಮಾಡಲಾಗಿದೆ, ನೀವೇನೋ ಮುಚ್ಚಿಡಲು ಬಯಸುತ್ತಿದ್ದೀರಿ ? ಇದರೊಳಗೆ ದನದ ಮಾಂಸ ಅಡಗಿದೆಯೇ ಎಂದು ಪತ್ರಕರ್ತೆ ವಿನಾ ಕಾರಣ ವಿವಾದ ಸೃಷ್ಟಿಸಲು ಯತ್ನಿಸಿದ್ದಾಳೆ. ಈ ಬಗ್ಗೆ ಪ್ರತಿಕ್ರಿಯಿಸಿದ ಉದ್ಯೋಗಿ , ನಿಮ್ಮ ಮೈಕ್ ಕಳಚಿಟ್ಟು ಮಾತಾನಾಡುವುದಾದರೆ ಮಾತನಾಡಿ, ಇಲ್ಲದಿದ್ದರೆ ನಾನು ಮಾತನಾಡಲಾರೆ ಎಂದಿದ್ದಾರೆ.
ಉದ್ಯೋಗಿಯ ಖಡಕ್ ತಿರುಗೇಟಿನ ವೀಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಶಹಬ್ಬಾಸ್ ಎಂದಿದ್ದಾರೆ. ಪ್ಯಾಕೆಟ್ ನಲ್ಲಿ ಮುದ್ರಣಗೊಂಡಿರುವುದು ಉರ್ದು ಭಾಷೆಯಲ್ಲ ಬದಲಾಗಿ ಅರೇಬಿಕ್ ಆಗಿದೆ. ಹಲ್ದಿರಾಮ್ಸಿನ ಹಲವಾರು ಉತ್ಪನ್ನಗಳು ಗಲ್ಫ್ ದೇಶಗಳಿಗೆ ರಫ್ತಾಗುವುದರಿಂದ ಅರೇಬಿಕ್ ಬಾಷೆಯಲ್ಲಿ ಬರೆಯಲಾಗಿದೆ, ಇದರಿಂದ ಸುದರ್ಶನ್ ವಾಹಿನಿಗೇನು ಸಮಸ್ಯೆ ಎಂದು ಪ್ರಶ್ನಿಸಿದ್ದಾರೆ.