ದುಮ್ಕಾ: ಪರೀಕ್ಷೆಯಲ್ಲಿ ಫೇಲಾದರೆ ಶಿಕ್ಷಕರು ಮಕ್ಕಳಿಗೆ ಶಿಕ್ಷೆಯನ್ನು ನೀಡಿರುವುದು ಕೇಳಿರಬಹುದು. ಆದರೆ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ವಸತಿ ಶಾಲೆಯ ಗಣಿತ ಶಿಕ್ಷಕ ಮತ್ತು ಗುಮಾಸ್ತನನ್ನು ವಿದ್ಯಾರ್ಥಿಗಳು ಮರಕ್ಕೆ ಕಟ್ಟಿ ಥಳಿಸಿದ ಅಮಾನವೀಯ ಘಟನೆ ಜಾರ್ಖಂಡ್ ನ ದುಮ್ಕಾ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಗೋಪಿಕಂದರ್ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ಕಾರಿ ಪರಿಶಿಷ್ಟ ಪಂಗಡದ ವಸತಿ ಶಾಲೆಯಲ್ಲಿ 9ನೇ ತರಗತಿ ಪರೀಕ್ಷೆಯ ಫಲಿತಾಂಶವನ್ನು ಜಾರ್ಖಂಡ್ ಅಕಾಡೆಮಿಕ್ ಕೌನ್ಸಿಲ್ (ಜೆಎಸಿ) ಪ್ರಕಟಿಸಿದ ನಂತರ ಸೋಮವಾರ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಿಕ್ಷಕನನ್ನು ಸುಮನ್ ಕುಮಾರ್, ಗುಮಾಸ್ತನನ್ನು ಸೋನಾರಾಮ್ ಚೌರೆ ಎಂದು ಗುರುತಿಸಲಾಗಿದ್ದು, ಅವರು ಪೊಲೀಸರಿಗೆ ಯಾವುದೇ ಲಿಖಿತ ದೂರು ನೀಡಿಲ್ಲ ಎಂದು ತಿಳಿದು ಬಂದಿದೆ.
ಘಟನೆಯ ಬಗ್ಗೆ ಶಾಲಾ ಆಡಳಿತ ಮಂಡಳಿ ಯಾವುದೇ ಲಿಖಿತ ದೂರು ನೀಡದ ಕಾರಣ ಯಾವುದೇ ಎಫ್ ಐಆರ್ ದಾಖಲಾಗಿಲ್ಲ. ಘಟನೆಯ ಪರಿಶೀಲನೆಯ ನಂತರ, ದೂರು ದಾಖಲಿಸುವಂತೆ ಶಾಲಾ ಪ್ರಾಧಿಕಾರವನ್ನು ಕೇಳಿದರೂ ವಿದ್ಯಾರ್ಥಿಗಳ ವೃತ್ತಿಜೀವನವನ್ನು ಹಾಳಾಗುತ್ತದೆ ಎಂಬ ಕಾರಣದಿಂದ ಶಾಲಾ ಪ್ರಾಧಿಕಾರ ನಿರಾಕರಿಸಿತು ಎಂದು ಗೋಪಿಕಂದರ್ ಪೊಲೀಸ್ ಠಾಣೆಯ ಉಸ್ತುವಾರಿ ನಿತ್ಯಾನಂದ್ ಭೋಕ್ತಾ ತಿಳಿಸಿದ್ದಾರೆ.