ಹೈಕೋರ್ಟ್ ಮಧ್ಯಂತರ ಆದೇಶವನ್ನು ತಪ್ಪಾಗಿ ಅರ್ಥೈಸಿ ವಿದ್ಯಾರ್ಥಿಗಳು, ಶಿಕ್ಷಕರ ಹಿಜಾಬ್ ತೆಗೆಸಲಾಗುತ್ತಿದೆ: ಯು.ಟಿ.ಖಾದರ್ ಅಸಮಾಧಾನ

Prasthutha|

ಬೆಂಗಳೂರು: ಹಿಜಾಬ್ ವಿಷಯದಲ್ಲಿ ಹೈಕೋರ್ಟ್ ನ ಮಧ್ಯಂತರ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡು ಹೈಸ್ಕೂಲ್ ನಲ್ಲಿಯೂ ಹಿಜಾಬ್ ತೆಗೆಸುವ ಘಟನೆಗಳು ನಡೆಯುತ್ತಿವೆ. ಮಾತ್ರವಲ್ಲ ಶಿಕ್ಷಕರ ಬುರ್ಖಾ ಮತ್ತು ಹಿಜಾಬ್ ತೆಗೆಸುವ ಕೃತ್ಯಗಳು ನಡೆಯುತ್ತಿವೆ. ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಹೈಕೋರ್ಟ್ ನ ಮಧ್ಯಂತರ ಆದೇಶದಿಂದ ಉಂಟಾಗಿರುವ ಗೊಂದಲವನ್ನು ನಿವಾರಿಸಿ ಆದೇಶವನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಶಾಸಕ ಯು.ಟಿ.ಖಾದರ್ ಒತ್ತಾಯಿಸಿದ್ದಾರೆ.

- Advertisement -

ವಿಧಾನಸಭೆಯಲ್ಲಿ ಶೂನ್ಯವೇಳೆಯಲ್ಲಿ ಹಿಜಾಬ್ ವಿಷಯ ಪ್ರಸ್ತಾಪಿಸಿದ ಅವರು, ಶಾಲಾ ಕಾಲೇಜುಗಳಲ್ಲಿ ನಡೆಯುತ್ತಿರುವ ಅಹಿತಕರ ಘಟನೆಯಿಂದ ಎಲ್ಲರಿಗೂ ನೋವಾಗಿದೆ. ಕೆಲವೆಡೆ 10ನೇ ತರಗತಿ ಪೂರಕ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ. ನ್ಯಾಯಾಲಯ  ಆದೇಶದಿಂದ ಗೊಂದಲ ಉಂಟಾಗಿದೆ. ಗೊಂದಲ ನಿವಾರಿಸುವುದು ಸರ್ಕಾರದ ಕರ್ತವ್ಯ ಎಂದರು.

ಕೆಲವರು ಕೋರ್ಟ್ ಆದೇಶವನ್ನು ಅಪಾರ್ಥ ಮಾಡಿಕೊಂಡು ಹೈಸ್ಕೂಲ್ ಗಳಲ್ಲಿಯೂ ಇದನ್ನು ಜಾರಿಗೊಳಿಸಲು ಮುಂದಾಗಿದ್ದಾರೆ. ತೀರ್ಪಿನಲ್ಲಿ ವಿದ್ಯಾರ್ಥಿಗಳು ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದರೂ ಶಿಕ್ಷಕರಿಗೂ ಅದನ್ನು ಅನ್ವಯಿಸಲಾಗುತ್ತಿದೆ. ಸರ್ಕಾರ ತಕ್ಷಣ ಇದನ್ನು ಸರಿಪಡಿಸಿ ಶೈಕ್ಷಣಿಕ ವಾತಾವರಣವನ್ನು ಪೂರ್ವ ಸ್ಥಿತಿಗೆ ತರಬೇಕು ಎಂದರು.

- Advertisement -

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಜೆ.ಸಿ.ಮಾಧುಸ್ವಾಮಿ, ಶಿಕ್ಷಣ ಸಚಿವರಿಂದ ಈ ಸಂಬಂಧ ಉತ್ತರ ತರಿಸಲಾಗುವುದು. ನ್ಯಾಯಾಲಯದ ಆದೇಶ ಪಾಲನೆಗೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

Join Whatsapp