8ರಿಂದ 10ನೇ ತರಗತಿವರೆಗೆ ಒಬ್ಬರೇ ಶಿಕ್ಷಕ: ಶಿಕ್ಷಕರನ್ನು ನೇಮಕಮಾಡಿ ಪುಣ್ಯ ಕಟ್ಟಿಕೊಳ್ಳಿ ಎಂದ ವಿದ್ಯಾರ್ಥಿಗಳು

Prasthutha|

ಬೀದರ್: ಎಂಟರಿಂದ ಹತ್ತನೇ ತರಗತಿಯವರೆಗೆ 151 ಮಕ್ಕಳು ಓದುತ್ತಿದ್ದಾರೆ. ಎಲ್ಲಾ ಮಕ್ಕಳು ಪ್ರತಿದಿನವೂ ಶಾಲೆಗೆ ಬರುತ್ತಾರೆ ಆದರೆ, ಶಿಕ್ಷಕರೆ ಅಲ್ಲಿಲ್ಲ. ಹೀಗಾಗಿ ಉತ್ತಮ ಗುಣಮಟ್ಟದ ಶಿಕ್ಷಣ ಆ ಮಕ್ಕಳಿಗೆ ಮರಿಚಿಕೆಯಾಗಿದೆ. ಉಚಿತವಾಗಿ ಶಿಕ್ಷಣ ಸಿಗುತ್ತದೆಂದು ಸರಕಾರಿ ಪ್ರೌಢ ಶಾಲೆ ಆಯ್ಕೆ ಮಾಡಿಕೊಂಡಿರುವ ಮಕ್ಕಳಿಗೆ ಶಾಲೆಗೆ ಶಿಕ್ಷಕರನ್ನ ನೇಮಕ ಮಾಡದೆ ಮಕ್ಕಳ ಶಿಕ್ಷಣದ ಜೊತೆಗೆ ಸರಕಾರ ಚೆಲ್ಲಾಟವಾಡುತ್ತಿದೆ.

- Advertisement -

ಗಡಿ ಜಿಲ್ಲೆ ಬೀದರ್, ತೆಲಗಾಂಣ ಹಾಗೂ ಮಹಾರಾಷ್ಟ್ರ ಎರಡು ರಾಜ್ಯದ ಗಡಿಯನ್ನು ಹಂಚಿಕೊಂಡಿದೆ. ಆದರೆ ಗಡಿಯಲ್ಲಿರುವ ಸರಕಾರಿ ಶಾಲೆಗಳನ್ನು ಶಿಕ್ಷಣ ಇಲಾಖೆ ನಿರ್ಲಕ್ಷ್ಯ ಮಾಡುತ್ತಿದೆ ಅನ್ನೊದಕ್ಕೆ ಈ ಸರಕಾರಿ ಪ್ರೌಢ ಶಾಲೆಯೇ ಇದಕ್ಕೆ ಉತ್ತಮ ಉದಾಹರಣೆಯಾಗಿದೆ.

ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಮಹಾರಾಷ್ಟ್ರದ ಗಡಿಯನ್ನು ಹಂಚಿಕೊಂಡಿರುವ ಜಂಬಗಿ ಸರಕಾರಿ ಪ್ರೌಢ ಶಾಲೆಯಲ್ಲಿಯಲ್ಲಿ ಎಂಟರಿಂದ ಹತ್ತನೇ ತರಗತಿಯವರೆಗೆ 151 ಮಕ್ಕಳು ಇಲ್ಲಿ ಓದುತ್ತಿದ್ದಾರೆ. ಆದರೆ ಇಷ್ಟು ಮಕ್ಕಳಿಗೆ ಒಬ್ಬರೇ ಒಬ್ಬರು ಶಿಕ್ಷಕರಿದ್ದು, ಒಬ್ಬರೇ ಶಿಕ್ಷಕರು ಎಲ್ಲಾ ಮಕ್ಕಳಿಗೆ ಪಾಠ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಶಾಲೆ ಆರಂಭವಾಗಿ ಮೂರು ತಿಂಗಳು ಕಳೆದಿದೆ ಇನ್ನೂ ಕೂಡ ಮಕ್ಕಳಿಗೆ ಪಾಠವೇ ಆರಂಭವಾಗಿಲ್ಲ. ಒಬ್ಬರು ಗಣಿತ ಶಿಕ್ಷಕರಿದ್ದು, ಅವರು ಗಣಿತ ವಿಷಯದ ಬಗ್ಗೆ ಪಾಠ ಮಾಡುತ್ತಿದ್ದಾರೆ.

- Advertisement -

ಆದರೆ ಇನ್ನುಳಿದ ಪಾಠವನ್ನು ಹೇಳಲು ಇಲ್ಲಿ ಶಿಕ್ಷಕರಿಲ್ಲ. ಹೀಗಾಗಿ ಮಕ್ಕಳಿಗೆ ಶಿಕ್ಷಣದ ಮೇಲೆ ಭಾರೀ ಹೊಡೆತ ಬೀಳುತ್ತಿದೆ. ಮಕ್ಕಳು ತಾವೇ ಪುಸ್ತಕವನ್ನು ಓದಿಕೊಂಡು ಪರೀಕ್ಷೆ ಬರೆಯುವ ಸ್ಥಿತಿ ನಿರ್ಮಾಣವಾಗಿದೆ. ನಮಗೆ ಶಿಕ್ಷಕರನ್ನ ನೇಮಕಮಾಡಿ ಪುಣ್ಯ ಕಟ್ಟಿಕೊಳ್ಳಿ ಎಂದು ವಿದ್ಯಾರ್ಥಿಗಳು ಶಿಕ್ಷಣ ಇಲಾಖೆಗೆ ಮನವಿ ಮಾಡುತ್ತಿದ್ದಾರೆ.

ಈ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರತಿದಿನವೂ ತಪ್ಪದೆ ಶಾಲೆಗೆ ಬರುತ್ತಾರೆ. ಒಬ್ಬರು ಶಿಕ್ಷಕರು ಎಲ್ಲಾ ಮಕ್ಕಳಿಗೂ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಲು ಸಾಧ್ಯವೆ ಎನ್ನುವ ಪ್ರಶ್ನೆ ಗ್ರಾಮಸ್ಥರನ್ನು ಕಾಡತೊಡಗಿದೆ. ಹೀಗಾಗಿ ತಮ್ಮ ಶಾಲೆಗೆ ಶಿಕ್ಷಕರನ್ನು ನೇಮಕ ಮಾಡಿ ಮಕ್ಕಳಿಗೆ ಉತ್ತಮಗುಣಮಟ್ಟದ ಶಿಕ್ಷಣ ಕೊಡಿಸುವಂತೆ ಮನವಿ ಮಾಡುತ್ತಿದ್ದಾರೆ.

ನಮ್ಮ ಶಾಲೆಗೆ ಶಿಕ್ಷಕರನ್ನು ನೇಮಕ ಮಾಡಿ ಎಂದು ಹತ್ತಾರು ಸಲ ಡಿಡಿಪಿಐ ಅವರಿಗೆ ಮನವಿ ಮಾಡಿದರೂ ಕೂಡ ನೇಮಕ ಮಾಡುತ್ತಿಲ್ಲ. ಹೀಗಾಗಿ ಕಳೆದ ಎರಡು ತಿಂಗಳಿಂದ ಮಕ್ಕಳಿಗೆ ಒಬ್ಬರೇ ಶಿಕ್ಷಕರು ಪಾಠ ಹೇಳಿಕೊಡುತ್ತಿದ್ದಾರೆ. ಉಚಿತವಾಗಿ ಶಿಕ್ಷಣ ಸಿಗುತ್ತದೆಂದು ಸರಕಾರಿ ಕನ್ನಡ ಶಾಲೆಗೆ ಬರುವ ಮಕ್ಕಳಿಗೆ ಶಿಕ್ಷಕರನ್ನೇ ನೇಮಕ ಮಾಡದೆ ಹೋದರೆ ಮಕ್ಕಳ ಭವಿಷ್ಯ ಏನಾಗಬಹುದೆಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.



Join Whatsapp