► ಬೆಂಗಳೂರು ವಿಶ್ವವಿದ್ಯಾಲಯ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಂದ ಜ್ಞಾನಭಾರತಿ ಚಲೋ
ಬೆಂಗಳೂರು: ರಾಜ್ಯ ಸರಕಾರವು ಯುಜಿಸಿ ಮಾರ್ಗಸೂಚಿಯನ್ನು ಅನುಸರಿಸಿ ತನ್ನ ನಿರ್ಧಾರವನ್ನು ಪ್ರಕಟಿಸಿ ಸುತ್ತೋಲೆ ಹೊರಡಿಸಿದೆ. ಇದರಿಂದಾಗಿ ಅಂತಿಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಒಂದೇ ತಿಂಗಳಿನಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆ ಎದುರಿಸುವಂತಾಗಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಅಂದರೆ ಒಂದೇ ತಿಂಗಳಿನಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆ ಬರೆಯಲು ಸಾಧ್ಯವೇ ಇಲ್ಲ ಎಂದು ಪಟ್ಟು ಹಿಡಿದಿರುವ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಇಂದು ಬೆಂಗಳೂರು ವಿಶ್ವವಿದ್ಯಾಲಯದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ ಆರ್ಗನೈಸೇಶನ್ (AIDSO) ಸರಕಾರದ ಮಾರ್ಗಸೂಚಿಯನ್ನು ವಿರೋಧಿಸಿ ಇಂದು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡು ಬೆಂಗಳೂರು ವಿವಿಯ ಅಂತಿಮ ವರ್ಷದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೂ ಯುಜಿಸಿ ಮಾರ್ಗಸೂಚಿಯನ್ನು ಅನುಸರಿಸಿ ಮತ್ತು ಒಂದೇ ಸೆಮಿಸ್ಟರ್ ಪರೀಕ್ಷೆ ನಡೆಸುವಂತೆ ಒತ್ತಾಯಿಸಿ ಬೆಂಗಳೂರು ವಿವಿ ಕುಲಪತಿಗೆ ಮನವಿ ಸಲ್ಲಿಸಿತು.
UGC ಗೈಡ್ ಲೈನ್ಸ್ ನ ಪ್ರಕಾರ ಪರೀಕ್ಷೆ ಗೆ ಆಗ್ರಹಿಸಿದ ವಿದ್ಯಾರ್ಥಿಗಳು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನ ಭಾರತಿ ಗೇಟ್ ನಿಂದ ವಿವಿ ವರೆಗೆ ಕಾಲ್ನಡಿಗೆ ಜಾಥಾ ನಡೆಸಿ ಬಳಿಕ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಆಗ್ರಹಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ವಿವಿ ಅಧಿಕಾರಿಗಳು ವಿದ್ಯಾರ್ಥಿಗಳನ್ನು ಸಮಾಧಾನ ಪಡಿಸಲು ಹರಸಾಹಸಪಟ್ಟರು. ವಿದ್ಯಾರ್ಥಿಗಳ ಬೇಡಿಕೆ ಆಲಿಸಿ ಸರಕಾರದೊಂದಿಗೆ ಈ ಬಗ್ಗೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದರು.