►ಕಾನೂನು ಹೋರಾಟದ ಮೂಲಕ ಹಿಜಾಬ್ ಹಕ್ಕು ಪಡೆಯಲು ನಿರ್ಧಾರ
ಉಡುಪಿ: ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ಗೆ ನಿರ್ಬಂಧಿಸಿದ್ದು, ಸುಮಾರು ಒಂದು ತಿಂಗಳಿನಿಂದ ಹೋರಾಟನಿರತ ವಿದ್ಯಾರ್ಥಿಗಳು ಇಂದು ಮತ್ತೆ ಹಿಜಾಬ್ ಧರಿಸಿಯೇ ಕಾಲೇಜು ಪ್ರವೇಶಿಸಿದ್ದಾರೆ.
ನಿನ್ನೆಯ ದಿನ ಶಾಸಕ ರಘುಪತಿ ಭಟ್ ಮಾಧ್ಯಮದವರ ಮುಂದೆ “ಹಿಜಾಬ್ ಧರಿಸಿ ಕಾಲೇಜು ಆವರಣದೊಳಗೆ ವಿದ್ಯಾರ್ಥಿಗಳು ಬರಬಾರದು” ಎಂದು ಹೇಳಿಕೆ ನೀಡಿದ್ದರು. ಇದನ್ನೇ ಸವಾಲಾಗಿ ಸ್ವೀಕರಿಸಿ ನಿನ್ನೆಯ ದಿನವೇ ಹೋರಾಟ ನಿರತ ವಿದ್ಯಾರ್ಥಿನಿ ಆಲಿಯಾ ಅಸ್ಸಾದಿ ಟ್ವೀಟ್ ಮಾಡಿ “ಧಾರ್ಮಿಕ, ಸಾಂವಿಧಾನಿಕ ಹಕ್ಕಾದ ಹಿಜಾಬ್ ಧರಿಸಿಯೇ ಕಾಲೇಜಿಗೆ ಬರುತ್ತೇವೆ. ಅದು ನಾವು ತೆರಿಗೆ ಪಾವತಿಸುವ ಸರ್ಕಾರಿ ಕಾಲೇಜು. ಯಾರು ಕೂಡ ಹಸ್ತಕ್ಷೇಪ ಮಾಡುವ ಅವಶ್ಯಕತೆಯಿಲ್ಲ. ಬೆದರಿಕೆಗಳಿಂದ ನಮ್ಮ ನ್ಯಾಯಪರ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ.” ಎಂದು ತಿರುಗೇಟು ನೀಡಿದ್ದರು. ಅದರಂತೆಯೇ ಇಂದು ಕಾಲೇಜಿಗೆ ಬಂದ ಆರು ವಿದ್ಯಾರ್ಥಿನಿಯರನ್ನು ಮತ್ತೆ ತರಗತಿಗಳಿಂದ ಹೊರ ಹಾಕಿದ್ದಾರೆ.
ನಾವು ಮಾನಸಿಕವಾಗಿ ತೀರ ನೊಂದು ಕೊಂಡಿದ್ದೇವೆ, ಒಂದು ತಿಂಗಳಿನಿಂದ ಹೋರಾಟ ನಿರತರಾಗಿದ್ದೇವೆ, ನ್ಯಾಯದ ಭರವಸೆಯಲ್ಲಿದ್ದೇವೆ. ನಿನ್ನೆಯ ದಿನ ಶಾಸಕ ರಘುಪತಿ ಭಟ್ ರವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಮ್ಮನ್ನು ಹೀಯಾಳಿಸಿ, ಬೈದು ನಮ್ಮ ಕಣ್ಣಲ್ಲಿ ಕಣ್ಣೀರು ಬರಿಸಿದ್ದಾರೆ. ಎಲ್ಲದಕ್ಕೂ ಕಾನೂನಿನ ಮುಖಾಂತರ ಉತ್ತರ ನೀಡಲಿದ್ದೇವೆ” ಎಂದು ವಿದ್ಯಾರ್ಥಿನಿಯರು ತಿಳಿಸಿದ್ದಾರೆ.
ಕಾಲೇಜು ಆವರಣದೊಳಗೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿದ್ದು, ಪೊಲೀಸ್ ಬಂದೋಬಸ್ತ್ ಬಿಗಿಗೊಳಿಸಲಾಗಿದೆ.