ಉಡುಪಿ ಸರಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಹಿಜಾಬ್ ಹಾಕಿದ ಕಾರಣಕ್ಕೆ ಪ್ರವೇಶ ನಿರಾಕರಣೆ

Prasthutha: December 31, 2021

ವಿದ್ಯಾರ್ಥಿನಿಯರ ತರಗತಿ ಪ್ರವೇಶ ನಿರಾಕರಣೆಗೆ SDPI ಖಂಡನೆ

ಉಡುಪಿ: ಹಿಜಾಬ್ ಧರಿಸಿ ಬರುತ್ತಿರುವ ವಿದ್ಯಾರ್ಥಿನಿಯರಿಗೆ ಕಾಲೇಜ್ ಪ್ರಿನ್ಸಿಪಾಲರು ತರಗತಿಗೆ ಪ್ರವೇಶ ನಿರಾಕರಿಸಿದ ಘಟನೆ ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ.

ಹಿಜಾಬ್ ಧರಿಸಿದ 6 ವಿದ್ಯಾರ್ಥಿನಿಯರಿಗೆ ತರಗತಿಗೆ ಪ್ರವೇಶ ನಿರಾಕರಿಸಲ್ಪಟ್ಟಿದ್ದು, ಕಳೆದ ನಾಲ್ಕು ದಿನಗಳಿಂದ ವಿದ್ಯಾರ್ಥಿನಿಯರು ಕಾಲೇಜಿನ ಹೊರಗಡೆ ಬಿಸಿಲಿನಲ್ಲಿ ನಿಲ್ಲುವಂತಾಗಿದೆ. ವಿದ್ಯಾರ್ಥಿನಿಯರ ಪೋಷಕರು ಈ ಬಗ್ಗೆ ಕಾಲೇಜು ಆಡಳಿತ ಮಂಡಳಿಯ ಬಳಿ ಮಾತುಕತೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ.

ವಿದ್ಯಾರ್ಥಿ ಸಂಘಟನೆಯಾದ ಕ್ಯಾಂಪಸ್ ಫ್ರಂಟ್ ಈ ಕುರಿತು ಮಧ್ಯಪ್ರವೇಶಿಸಿ ಮನವಿ ಮಾಡಿದರೂ ತಮ್ಮ ಕ್ರಮವನ್ನು ಕಾಲೇಜು ಆಡಳಿತ ಮಂಡಳಿ ಸಮರ್ಥಿಸಿಕೊಂಡಿದೆ.

ಈ ಕುರಿತು ಪ್ರತಿಕ್ರಿಯಿಸಿದ ವಿದ್ಯಾರ್ಥಿನಿಗಳು ನಾವು ಹಿಜಾಬ್ ಧರಿಸುವುದರಿಂದಾಗಿ ನಮ್ಮನ್ನು ತರಗತಿಗೆ ಸೇರಿಸಿಕೊಳ್ಳುತ್ತಿಲ್ಲ. ನಮ್ಮ ಹಕ್ಕುಗಳನ್ನು ಕಸಿಯಲಾಗುತ್ತಿದೆ. ಕಾಲೇಜ್ ಆವರಣದಲ್ಲಿ ಉರ್ದು, ಬ್ಯಾರಿ ಭಾಷೆ ಮಾತನಾಡುವುದು, ಸಲಾಂ ಮಾಡುವುದನ್ನು ನಿರ್ಬಂಧಿಸಲಾಗಿದೆ. ನಮಗೆ ಹಿಜಾಬ್ ಧರಿಸಲು ಅವಕಾಶ ನೀಡಬೇಕು. ನಮಗೆ ನ್ಯಾಯ ಬೇಕು ಎಂದು ಅಳಲು ತೋಡಿಕೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆಗಾಗಿ ‘ಪ್ರಸ್ತುತ’ ಕಾಲೇಜು ಪ್ರಾಂಶುಪಾಲ ರುದ್ರೇಗೌಡರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ.

https://youtu.be/QX7cBNfobDk

ವಿದ್ಯಾರ್ಥಿನಿಯರನ್ನು ತರಗತಿಗೆ ಪ್ರವೇಶ ನಿರಾಕರಣೆ ಮಾಡಿರುವ ಪ್ರಾಂಶುಪಾಲರ ಕ್ರಮವನ್ನು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ಉಡುಪಿ ಜಿಲ್ಲಾ ಸಮಿತಿ ಖಂಡಿಸಿದೆ.

ಮುಸ್ಲಿಂ ಹೆಣ್ಣು ಮಕ್ಕಳಿಗೆ ಸ್ಕಾರ್ಫ್ ಧರಿಸುವುದು ಧಾರ್ಮಿಕ ನಂಬಿಕೆಯ ಭಾಗವಾಗಿದೆ ಮತ್ತು ನಮ್ರತೆಯ ಚಿಹ್ನೆಯಾಗಿದೆ. ಅದೇ ರೀತಿ ಸಂವಿಧಾನದ 25ನೇ ವಿಧಿಯಂತೆ ಧರ್ಮವನ್ನು ಮುಕ್ತವಾಗಿ ಪ್ರತಿಪಾದಿಸುವ, ಅಭ್ಯಸಿಸುವ, ಆಚರಿಸುವ ಮೂಲಭೂತ ಹಕ್ಕಿನ ಭಾಗವಾಗಿದೆ. ಈ ಕುರಿತು ಕಾಲೇಜು ಪ್ರಾಂಶುಪಾಲರು ಫ್ಯಾಶಿಸ್ಟ್ ಧೋರಣೆಯನ್ನು ಅನುಸರಿಸಿ, ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತಿದ್ದು ಈ ಕುರಿತು ಕಾಲೇಜಿನ ಪ್ರಾಂಶುಪಾಲರಲ್ಲಿ ವಿದ್ಯಾರ್ಥಿನಿಯರ ಪೋಷಕರು ಹಾಗೂ ವಿದ್ಯಾರ್ಥಿ ಸಂಘಟನೆಯ ಪದಾಧಿಕಾರಿಗಳು ಹಲವು ಬಾರಿ ಮಾತನಾಡಿದ್ದರು ಸಹ ಅವರಿಗೆ ಯಾವುದೇ ಮನ್ನಣೆ ಸಿಗಲಿಲ್ಲ ಹಾಗೂ ಕಳೆದ 4 ದಿನಗಳಿಂದ ವಿದ್ಯಾರ್ಥಿನಿಯರನ್ನು ತರಗತಿಯಿಂದ ಹೊರಹಾಕುವ ಮೂಲಕ ಅವರ ಕಲಿಕೆಗೆ ತೊಡಕುಂಟು ಮಾಡಲಾಗಿದೆ. ಆದ್ದರಿಂದ ಶಿಕ್ಷಣಾಧಿಕಾರಿಗಳು ಹಾಗೂ ಸಂಬಂಧಪಟ್ಟವರು ಪ್ರಾಂಶುಪಾಲರ ಈ ತಾರತಮ್ಯ ನೀತಿಯನ್ನು ಗಂಭೀರವಾಗಿ ಪರಿಗಣಿಸಿ ಪ್ರಾಂಶುಪಾಲ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ವಿದ್ಯಾರ್ಥಿನಿಯರಿಗೆ ತರಗತಿಗೆ ಹಾಜರಾಗಲು ಅನುವು ಮಾಡಿಕೊಡಬೇಕು. ಇಲ್ಲವೇ ತೀವ್ರ ಹೋರಾಟ ಮಾಡಬೇಕಾದೀತು ಎಂದು SDPI ಉಡುಪಿ ಜಿಲ್ಲಾಧ್ಯಕ್ಷ ನಝೀರ್ ಅಹಮದ್ ಎಚ್ಚರಿಸಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!