ಶೌಚಾಲಯ ಕಟ್ಟಿಸಿಕೊಡುವಂತೆ ಸಿಎಂ ಮೊರೆ ಹೋದ ವಿದ್ಯಾರ್ಥಿಗಳು

Prasthutha|

ಬೆಂಗಳೂರು: ಶೌಚಾಲಯ ನಿರ್ಮಿಸಿ ಕೊಡುವಂತೆ ಮನವಿ ಮಾಡಿ ವಿದ್ಯಾರ್ಥಿಗಳು ನೇರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಘಟನೆ ಚಾಮರಾಜನಗರದ ಗುಂಡ್ಲುಪೇಟೆಯ ತಾಲೂಕಿನ ಅಣ್ಣೂರು ಕೇರಿಯಲ್ಲಿನಡೆದಿದೆ.

- Advertisement -

ಅಣ್ಣೂರು ಕೇರಿಯಲ್ಲಿರುವ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯೊಬ್ಬಳು ಪ್ರಸ್ತುತ ಪತ್ರದಲ್ಲಿ ‘ನಮ್ಮ ಶಾಲೆಯಲ್ಲಿ ಒಟ್ಟು 132 ವಿದ್ಯಾರ್ಥಿಗಳಿದ್ದೇವೆ. ಆದರೆ ನಮಗಿರುವುದು ಒಂದೇ ಒಂದು ಶೌಚಾಲಯ. ಶೌಚಾಲಯಕ್ಕೆ ಸರದಿಯಲ್ಲಿ ಹೋಗಬೇಕು. ಕನಿಷ್ಠ 30 ನಿಮಿಷ ಸರದಿಯಲ್ಲಿ ನಿಲ್ಲಬೇಕು. ಇದು ನನಗೆ ತುಂಬಾ ಮುಜುಗರವನ್ನುಂಟು ಮಾಡುತ್ತಿದೆ. ತಾವು ನನ್ನನ್ನು ಮಗಳು ಎಂದು ಭಾವಿಸಿ ಶೌಚಾಲಯ ಕಟ್ಟಿಸಿಕೊಡಿ, ನಾನು ಕೂಡಿಟ್ಟ ಹಣ 25 ರು.ಗಳನ್ನು ಕೊಡಲು ಸಿದ್ಧಳಿದ್ದೇನೆ,’ಎಂದು ಬರೆದಿದ್ದಾಳೆ.

‘ಎಲ್ಲಿದೆ ಶೌಚಮುಕ್ತ ಭಾರತ? ನಾನು ಶಾಲೆ ಬಿಡಲು ಶೌಚಾಲಯವೇ ಕಾರಣ. ಇಲ್ಲಿ ಶೌಚಾಲಯ ಇಲ್ಲದಿರುವುದರಿಂದಲೇ ನಾನು ಶಾಲೆ ಬಿಡಲು ತೀರ್ಮಾನಿಸಿದ್ದೇನೆ. ನನ್ನ ಜಾಗದಲ್ಲಿ ನಿಮ್ಮ ಮಗನೋ…ಮಗಳೋ ಇದ್ದರೆ ಏನು ಮಾಡುತ್ತೀದ್ದೀರಿ,’ ಎಂದು ಪತ್ರದಲ್ಲಿ ಬರೆಯಲಾಗಿದೆ.

- Advertisement -

ಪತ್ರ ಚಳವಳಿ ಆರಂಭಿಸಿರುವ ಅಣ್ಣೂರು ಕೇರಿಯ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಶೌಚಾಲಯ ನಿರ್ಮಾಣ ಮಾಡಿಕೊಡದಿದ್ದರೆ ಶಾಲೆಯನ್ನೇ ಬಿಡಬೇಕಾದ ಸ್ಥಿತಿ ಇದೆ ಎಂದು ಬರೆದಿರುವ ಸಾಲು ಸಾಲು ಪತ್ರಗಳತ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿರುಗಿಯೂ  ನೋಡಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

ಶಿರವಸ್ತ್ರ ,ಕೇಸರಿ ಮತ್ತು ನೀಲಿ ಶಾಲು ಧರಿಸಿ ತರಗತಿಗಳಿಗೆ ಪ್ರವೇಶಿಸುತ್ತಿರುವುದು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಶಾಲೆ, ಕಾಲೇಜುಗಳಲ್ಲಿನ ಹೆಣ್ಣು ಮಕ್ಕಳಿಗೆ ಶುದ್ಧ ಶೌಚಾಲಯಗಳಿಲ್ಲ ಎಂಬ ವಿಚಾರ  ಸರ್ಕಾರದ ಗಮನಕ್ಕೆ ಬಂದಿದ್ದರೂ ಹೆಣ್ಣು ಮಕ್ಕಳಿಗೆ ಶುದ್ಧ ಶೌಚಾಲಯಗಳನ್ನು ನಿರ್ಮಿಸಲು ಸರ್ಕಾರವು ನೈಜ ಕಾಳಜಿಯನ್ನು ಪ್ರದರ್ಶಿಸಿಲ್ಲ. ಅಷ್ಠೇ ಏಕೆ ಶಿರವಸ್ತ್ರ ಕೇಸರಿ, ನೀಲಿ ಶಾಲಿನಲ್ಲಿ ಮುಳುಗಿರುವ ವಿದ್ಯಾರ್ಥಿಗಳೂ ಸಹ ಶುದ್ಧ ಶೌಚಾಲಯಗಳಿಗಾಗಿ ಬೀದಿಗೂ ಇಳಿದಿಲ್ಲ.

Join Whatsapp