ವಿದ್ಯಾರ್ಥಿನಿಯ ಆತ್ಮಹತ್ಯೆ: ಬಲವಂತದ ಮತಾಂತರ ಆರೋಪ

Prasthutha|

ಚೆನ್ನೈ: ತನ್ನ ಕುಟುಂಬವನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿ ಆತ್ಮಹತ್ಯೆಗೆ ಯತ್ನಿಸಿದ್ದ 17 ವರ್ಷದ ಬಾಲಕಿ ಚಿಕಿತ್ಸೆ ಫಲಿಸದೆ ಬುಧವಾರ ಮೃತಪಟ್ಟಿದ್ದಾರೆ.
ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ 17 ವರ್ಷದ ಬಾಲಕಿ ಹೈಯರ್ ಸೆಕೆಂಡರಿಯಲ್ಲಿ ಕಲಿಯುತ್ತಿದ್ದಳು. ಜನವರಿ 9 ರಂದು ಆತ್ಮಹತ್ಯೆಗೆ ಯತ್ನಿಸಿದ್ದು, ಜನವರಿ 19 ರಂದು ಸಾವನ್ನಪ್ಪಿದ್ದಾಳೆ.
“ಎರಡು ವರ್ಷಗಳ ಹಿಂದೆ ಅವರು ನನ್ನ ಹೆತ್ತವರು ಮತ್ತು ನನಗೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸಿದರು. ಅವರು ನನ್ನ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ನೋಡಿಕೊಳ್ಳುವುದಾಗಿ ತಿಳಿಸಿದರು ಎಂದು ಹುಡುಗಿ ಹೇಳುತ್ತಿರುವ ವೀಡಿಯೊ ಬಹಿರಂಗಗೊಂಡಿತ್ತು.
ಮತಾಂತರ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಬಾಲಕಿಯ ಪೋಷಕರು ಕೂಡ ಒತ್ತಾಯಿಸಿದ್ದಾರೆ.
ಹಾಸ್ಟೆಲ್ ವಾರ್ಡನ್ ನನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಲಾಗಿದೆ.
ಮತಾಂತರದ ಬಗ್ಗೆ ಬಾಲಕಿ ಅಥವಾ ಆಕೆಯ ಕುಟುಂಬದವರು ಯಾವ ದೂರು ನೀಡಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
“ನಾವು ಆಕೆಯ ದೂರು, ಹೇಳಿಕೆಯ ವೀಡಿಯೊ ರೆಕಾರ್ಡ್ ಮಾಡಿದ್ದೇವೆ. ಮತಾಂತರದ ಬಗ್ಗೆ ಏನನ್ನೂ ಹೇಳಿಲ್ಲ.. ನಾವು ಈ ಆರೋಪದ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ” ಎಂದು ಎಸ್ಪಿ ರವಳಿ ಪ್ರಿಯಾ ಗಂಧಪುನೇನಿ ಹೇಳಿದರು.
ಅಪ್ರಾಪ್ತ ಬಾಲಕಿಯ ವಿಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ, ನ್ಯಾಯಯುತ ತನಿಖೆ ಮತ್ತು ತಪ್ಪಿತಸ್ಥರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

Join Whatsapp