ಬೆಂಗಳೂರು: ಮ್ಯಾನ್ ಹೋಲ್ ನಲ್ಲಿ ಆಕಸ್ಮಿಕವಾಗಿ ಬಿದ್ದ ವಿದ್ಯಾರ್ಥಿನಿಯನ್ನು ಸಮಯಪ್ರಜ್ಞೆ ತೋರಿ ಸ್ಥಳೀಯರು ರಕ್ಷಿಸಿರುವ ಘಟನೆ ಹೆಬ್ಬಾಳದ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ನಡೆದಿದೆ.
ನಾರಾಯಣ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದ 14 ವರ್ಷದ ವಿದ್ಯಾರ್ಥಿನಿ ದೀಪಿಕಾ ಳನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಹೆಬ್ಬಾಳದ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ತಡರಾತ್ರಿಯವರೆಗೆ ಸುರಿದ ಭಾರೀ ಮಳೆಯಿಂದ ರಸ್ತೆಗಳ ಮೇಲೆ ಮೂರರಿಂದ ನಾಲ್ಕು ಅಡಿಯಷ್ಟು ನೀರು ನಿಂತಿದ್ದು ಶಾಲೆಯ ಮುಂದೆ ಮ್ಯಾನ್ ಹೋಲ್ ತೆರೆದಿರುವುದು ವಿದ್ಯಾರ್ಥಿನಿಗೆ ಕಾಣಿಸಿಲ್ಲ.
ವಿದ್ಯಾರ್ಥಿನಿಯು ಇಂದು ಬೆಳಿಗ್ಗೆ ಶಾಲೆಗೆ ನಡೆದುಕೊಂಡು ಬರುವಾಗ ರಸ್ತೆಯ ಮುಂದೆ ಎಡಭಾಗಕ್ಕೆ ಬೈಕ್ ಅಡ್ಡ ಬಂದ ಪರಿಣಾಮವಾಗಿ, ವಿದ್ಯಾರ್ಥಿನಿ ದಿಪೀಕಾ ರಸ್ತೆಯ ಮದ್ಯಭಾಗಕ್ಕೆ ಬಂದಿದ್ದಾಳೆ. ರಸ್ತೆಯ ಮದ್ಯ ಭಾಗದಲ್ಲಿ ಮ್ಯಾನ್ ಹೋಲ್ ತೆರೆದಿರುವುದು ಕಾಣಿಸದೆ ಜಾರಿ ಬಿದ್ದಿದ್ದಾಳೆ.
ರಕ್ಷಣೆಗಾಗಿ ವಿದ್ಯಾರ್ಥಿನಿ ಚೀರುತ್ತಿದ್ದಂತೆ ಸ್ಥಳೀಯರು ಧಾವಿಸಿ ಮುಳುಗುತ್ತಿದ್ದ ಆಕೆಯನ್ನ ಮೇಲಕ್ಕೆತ್ತಿದ್ದಾರೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ವಿದ್ಯಾರ್ಥಿನಿಗೆ ಯಾವುದೇ ಅಪಾಯವಾಗಿಲ್ಲ.ಬಟ್ಟೆ ಕೊಳಚೆಯಾದ ಕಾರಣ ಪೋಷಕರು ಬಾಲಾಕಿಯನ್ನು ವಾಪಸ್ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಘಟನೆಯ ಬಳಿಕ ಎಚ್ಚೆತ್ತ ಜಲಮಂಡಳಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ದುರಸ್ಥಿ ಕಾರ್ಯಕ್ಕೆ ಮುಂದಾಗಿದ್ದಾರೆ.