ವಿದ್ಯಾರ್ಥಿ ಪೂರ್ವಜ್ ಸಾವು. ಶಾಲಾಡಳಿತದ ಮೇಲೆ ಕಠಿಣ ಕ್ರಮಕ್ಕೆ SFI ಆಗ್ರಹ

Prasthutha|

ಮಂಗಳೂರು:  ತಲಪಾಡಿಯಲ್ಲಿರುವ ಶಾರದಾ ವಿದ್ಯಾನಿಕೇತನ ವಸತಿ ಶಾಲೆಯಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿ ಪೂರ್ವಜ್ ಆತ್ಮಹತ್ಯೆಗೆ ಶಾಲಾ ಆಡಳಿತದ ಅಮಾನವೀಯ, ನಿಯಮ ಬಾಹಿರ ವರ್ತನೆಗಳೆ ನೇರ ಕಾರಣ. ವಿದ್ಯಾರ್ಥಿ ಸಾವಿಗೆ ಕಾರಣವಾಗಿರುವ ಶಾಲಾ ಆಡಳಿತ ಮಂಡಳಿಯ ಪ್ರಮುಖರನ್ನು ಬಂಧಿಸಿ ಪಾರದರ್ಶಕ ತನಿಖೆ ನಡೆಸಬೇಕು ಹಾಗೂ ಪೂರ್ವಜ್ ಪೋಷಕರಿಗೆ ನ್ಯಾಯ ಒದಗಿಸಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ ಎಫ್ ಐ) ದ ಕ ಜಿಲ್ಲಾ ಸಮಿತಿ ಆಗ್ರಹಿಸಿದೆ.

- Advertisement -

   ಎಸ್ ಎಫ್ ಐ ದ ಕ ಜಿಲ್ಲಾ ಸಮಿತಿ ಜಿಲ್ಲಾ ಸಂಚಾಲಕ ವಿನೀತ್ ದೇವಾಡಿಗ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ದಕ್ಷಿಣ ಕನ್ನಡ ಜಿಲ್ಲೆ ಶಿಕ್ಷಣ ಕ್ಷೇತ್ರದಲ್ಲಿ ಹೆಸರುಗಳಿಸಿದೆ. ಪ್ರತಿಷ್ಠಿತ ಎಂಬ ಹಣೆಪಟ್ಟಿ ಹೊಂದಿರುವ ಹಲವು ಖಾಸಗಿ ವಸತಿ ಶಾಲೆಗಳು ಕಾರ್ಯಾಚರಿಸುತ್ತಿವೆ. ಉತ್ತಮ ಫಲಿತಾಂಶದ ಆಸೆ ಹುಟ್ಟಿಸಿ ಹೊರ ಜಿಲ್ಲೆಗಳ ಪೋಷಕರನ್ನು ಇವುಗಳು ಆಕರ್ಷಿಸುತ್ತವೆ. ಉತ್ತಮ ಭವಿಷ್ಯದ ಕನಸುಗಳನ್ನು ಭಿತ್ತಿ ದುಬಾರಿ ಡೊನೇಷನ್, ಫೀಸುಗಳ ಹೆಸರಿನಲ್ಲಿ ಅಕ್ಷರಶಃ ಸುಲಿಗೆಗಳು ಇಂತಹ ಸಂಸ್ಥೆಗಳಲ್ಲಿ ನಡೆಯುತ್ತವೆ.  ಕಲಿಕೆಗಾಗಿ ರೂಪಿಸಿರುವ ನಿಯಮ, ಮಾನದಂಡಗಳನ್ನು ಗಾಳಿಗೆ ತೂರಿ ಕಲಿಕೆಯ ಹೆಸರಿನಲ್ಲಿ ವಿಶ್ರಾಂತಿ ರಹಿತವಾಗಿ ಹಿಂಸಾತ್ಮಕ ಅಧ್ಯಯನದಲ್ಲಿ ತೊಡಗಿಸಲಾಗುತ್ತಿದೆ. ಪೋಷಕರ ಭೇಟಿ, ಕನಿಷ್ಠ ಫೋನ್ ಸಂಪರ್ಕಗಳಿಗೆ ಅಮಾನವೀಯ ನಿರ್ಬಂಧಗಳನ್ನು ಹೇರಿ ವಸತಿ ಶಾಲೆಗಳನ್ನು ಜೈಲುಗಳಂತೆ ನಡೆಸಲಾಗುತ್ತಿದೆ. ಇದರ ಪರಿಣಾಮದಿಂದಲೆ ಶಾರದಾ ನಿಕೇತನ ವಸತಿ ಶಾಲೆಯಲ್ಲಿ ವಿದ್ಯಾರ್ಥಿಯ ಸಾವು ಉಂಟಾಗಿದೆ. ಹಿಂದೆಯೂ ಇದೇ ರೀತಿ ಹಲವು ವಿದ್ಯಾರ್ಥಿಗಳ ಸಾವು ದ. ಕ. ಜಿಲ್ಲೆಯ ಇಂತಹ ಪ್ರತಿಷ್ಠಿತ ಹಣೆಪಟ್ಟಿಯ ವಸತಿ ಶಾಲೆಗಳಲ್ಲಿ ನಡೆದಿದೆ. ಈ ಕುರಿತು ಹಲವು ದೂರುಗಳು ಜಿಲ್ಲಾಡಳಿತ ಹಾಗು ಶಿಕ್ಷಣ ಇಲಾಖೆಗೆ ಈ ಹಿಂದೆಯೂ ಸಲ್ಲಿಕೆಯಾಗಿದೆ. ಆದರೆ ದೃಢವಾದ ಕ್ರಮಗಳು ಕೈಗೊಳ್ಳದ ಕಾರಣ ಈಗ ಶಾರದಾ ನಿಕೇತನದಲ್ಲಿ ಮತ್ತೊರ್ವ ವಿದ್ಯಾರ್ಥಿಯ ದಾರುಣ ಸಾವು ಸಂಭವಿಸಿದೆ ಎಂದು ಅವರು ದೂರಿದ್ದಾರೆ.

ವಿದ್ಯಾರ್ಥಿ ಪೂರ್ವಜ್ ಸಾವಿಗೆ ಶಾರದಾ ನಿಕೇತನ ಶಾಲೆಯ ಅಧಿಕಾರಿಗಳೇ ನೇರ ಹೊಣೆಯಾಗಿದ್ದಾರೆ. ಫೋನ್ ಮೂಲಕ ತಾಯಿಯ ಹುಟ್ಟಿದ ದಿನದ ಶುಭಾಶಯ ಕೋರಲೂ ಅವಕಾಶ ನೀಡದಿರುವುದು ಪದಗಳಲ್ಲಿ ವರ್ಣಿಸಲಾಗದ ಅಕ್ಷಮ್ಯ ನಡವಳಿಕೆ. ತಕ್ಷಣವೇ ಶಾರದಾ ನಿಕೇತನ ಶಾಲೆಯ ಸಂಬಂಧ ಪಟ್ಟ ಅಧಿಕಾರಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತವನ್ನು ಆಗ್ರಹಿಸತ್ತದೆ ಎಂದು ಜಿಲ್ಲಾ ಸಂಚಾಲಕ ವಿನೀತ್ ದೇವಾಡಿಗ ಪ್ರಕಟನೆಯಲ್ಲಿ ತಿಳಿಸಿದ್ದಾರೆ



Join Whatsapp