ವಿದ್ಯಾರ್ಥಿ ನಾಯಕನ ಬಂಧನ: ಸಿಎಂಗೆ ಮುಖ್ಯಮಂತ್ರಿ ಚಂದ್ರು ಪತ್ರ

Prasthutha|

ಬೆಂಗಳೂರು: ನುಡಿದಂತೆ ನಡೆದಿದ್ದೇವೆ ಎಂಬ ಶೋಕಿಗಾಗಿ ಯುವಜನತೆಯ ಸ್ವಾಭಿಮಾನದ ಜೊತೆ ಆಟ ಆಡಬೇಡಿ. ನೇಮಕಾತಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಅಂತ್ಯ ಹಾಡುವುದನ್ನು ಬಿಟ್ಟು ನಿರುದ್ಯೋಗಭತ್ಯೆ ಮೂಲಕ ಯುವಜನತೆಯ ಉದ್ಧಾರ ಮಾಡುತ್ತೀವಿ ಎಂಬುದು ನಿಮ್ಮ ಬೂಟಾಟಿಕೆಯಲ್ಲವೇ? ಎಂದು ಮುಖ್ಯಮಂತ್ರಿ ಚಂದ್ರು ಖಾರವಾಗಿ ಪ್ರಶ್ನಿಸಿದ್ದಾರೆ.

- Advertisement -

ಯುವಜನತೆಯ ಪರವಾಗಿ ನೀವಿದ್ದೀರಿ ಎಂದರೆ ಈ ಕೂಡಲೇ ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿಯಲ್ಲಿ ನಡೆಯುತ್ತಿರುವ ಅಕ್ರಮದ ವಿರುದ್ಧ ತನಿಖೆ ನಡೆಸಿ. ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಎಸ್‌. ಸಾಹುಕಾರ್‌ ವಿರುದ್ಧ ಕ್ರಮ ಕೈಗೊಳ್ಳಿ. ಆ ಸ್ಥಾನದಿಂದ ಅವರನ್ನು ಕೂಡಲೇ ಅಲ್ಲಿಂದ ತೆರವು ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿಯಲ್ಲಿ ನಡೆಯುತ್ತಿರುವ ಅನ್ಯಾಯವನ್ನು ಪ್ರಶ್ನಿಸಿದ ವಿದ್ಯಾರ್ಥಿನಾಯಕನ ಕಾಂತಕುಮಾರ್‌ ಬಂಧನವನ್ನು ಖಂಡಿಸಿ ಆಮ್‌ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಮಂಗಳವಾರ ಪತ್ರ ಬರೆದಿದ್ದಾರೆ. ಹಿಂದಿನ ಅವಧಿಯ ಸರ್ಕಾರದ ವಿರುದ್ಧ ‘40% ಕಮಿಷನ್‌ ಸರ್ಕಾರ’ ಎಂದು ಆರೋಪಿಸಿ, ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡುತ್ತೀವಿ ಎಂಬ ವಾಗ್ದಾನವನ್ನು ನೀಡಿ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಅನ್ಯಾಯವನ್ನು ಪ್ರಶ್ನಿಸಿದ ವಿದ್ಯಾರ್ಥಿಗಳನ್ನೇ ಬಂಧಿಸುವ ಹಂತಕ್ಕೆ ನಿಮ್ಮ ಸರ್ಕಾರ ಇಳಿದಿರುವುದು ಏಕೆ? ಸರ್ವಾಧಿಕಾರದ ಧೋರಣೆ ತಳೆದಿರುವುದು ಏಕೆ? ಎಂದು ಪ್ರಶ್ನಿಸಿದ್ದಾರೆ.

ಯುವನಿಧಿ ಯೋಜನೆ ಬಿಡುಗಡೆ ಸಂದರ್ಭ ಪದವಿ ಪಡೆದ ನಂತರ ವಿದ್ಯಾರ್ಥಿಗಳು ಉತ್ತಮ ಉದ್ಯೋಗ ಹುಡುಕಿಕೊಳ್ಳಲು ನಿರುದ್ಯೋಗಭತ್ಯೆ ಕೊಡುತ್ತಿದ್ದೇವೆ ಎಂದು ಘೋಷಣೆ ಮಾಡಿದ್ದೀರಿ. ಆದರೆ ವಾಸ್ತವದಲ್ಲಿ ಭ್ರಷ್ಟಾಚಾರದಿಂದ ಅಭ್ಯರ್ಥಿಗಳ ಭವಿಷ್ಯವೇ ಹಾಳಾಗುತ್ತಿರುವುದು ನಿಮ್ಮ ಕಣ್ಣಿಗೆ ಕಾಣಿಸುತ್ತಿಲ್ಲವೇ? ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿಯಲ್ಲಿ ಗ್ರೂಪ್ ಡಿ ಹುದ್ದೆಯಿಂದ ಹಿಡಿದು ಗ್ರೂಪ್ ಎ ಹುದ್ದೆಗಳನ್ನು ಕೋಟಿಗಳಿಗೆ ಹರಾಜು ಹಾಕಲಾಗುತ್ತಿದೆ ಎಂಬ ವಿದ್ಯಾರ್ಥಿ ನಾಯಕನ ಆರೋಪದಲ್ಲಿ ಹುರುಳಿಲ್ಲವೇ? ಹಾಗಿದ್ದರೆ ಫಲಿತಾಂಶ ಪ್ರಕಟಿಸಲು ವಿಳಂಬ ನೀತಿ ಅನುಸರಿಸುತ್ತಿರುವುದೇಕೆ? ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಒಂದೊಂದು ಹುದ್ದೆಯ ಭರ್ತಿ ಮಾಡಲು ಒಂದು ವರ್ಷದ ಬದಲು ಐದು ವರ್ಷ ತೆಗೆದುಕೊಳ್ಳಲಾಗುತ್ತಿದೆ. 15 ನೋಟಿಫಿಕೇಶನ್‌ಗಳ ಪರೀಕ್ಷೆ ನಡೆದು ಎರಡು ವರ್ಷಗಳಾಗಿದೆ. ಆದರೆ ಅದರ ಫಲಿತಾಂಶವನ್ನು ಕೆಪಿಎಸ್‌ಸಿ ಇನ್ನೂ ಪ್ರಕಟಿಸಿಲ್ಲ. ಇದು ಮೇಲ್ನೋಟಕ್ಕೆ ನೇಮಕಾತಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂಬುದನ್ನು ಸಾರಿ ಹೇಳುತ್ತದೆ ಎಂದು ತಿಳಿಸಿದ್ದಾರೆ.

Join Whatsapp