ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅನಾರೋಗ್ಯಕ್ಕೊಳಗಾದ ವಿದ್ಯಾರ್ಥಿನಿ: ಸಕಾಲದಲ್ಲಿ ಚಿಕಿತ್ಸೆ ಕೊಡಿಸಿದ ಬಸ್ ಸಿಬ್ಬಂದಿ

Prasthutha|

ಮಡಿಕೇರಿ: ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ದಿಢೀರನೆ ಅಸ್ವಸ್ಥಗೊಂಡ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಯೋರ್ವಳನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಮಾನವೀಯತೆ ತೋರಿದ ಬಸ್ ಚಾಲಕ ಹಾಗೂ ನಿರ್ವಾಹಕನ ಸೇವಾಕಾರ್ಯಕ್ಕೆ ಇತರ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

- Advertisement -

ಹಾಸನ – ಎರ್ನಾಕುಳಂ ಮಾರ್ಗದ ಕೆ.ಎಸ್.ಆರ್.ಟಿ.ಸಿ  ಬಸ್ಸಿನಲ್ಲಿ ನಡೆದ ದಿಢೀರ್ ಬೆಳವಣಿಗೆಯಲ್ಲಿ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಪಡೆದ ವಿದ್ಯಾರ್ಥಿನಿಯನ್ನು ಅದೇ ಬಸ್ಸಿನಲ್ಲಿ ಮನೆಗೆ ಕಳಿಸಿ ಮಾನವೀಯತೆ ತೋರಿದ್ದಾರೆ.

ಕೇರಳದ ತ್ರಿಶ್ಶೂರ್ ಸಮೀಪದ ಅಂಗಮಾಲಿ ಗ್ರಾಮದ ನಿವಾಸಿಯಾಗಿರುವ ಹಾಸನದ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ಎಲಿಯಮ್ಮ, ತನ್ನ ಸ್ವಗ್ರಾಮಕ್ಕೆ ತೆರಳಲು ಹಾಸನದಿಂದ (KA 13 F2347) ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಕುಶಾಲನಗರ – ಸಿದ್ದಾಪುರ – ವಿರಾಜಪೇಟೆ ಮಾರ್ಗವಾಗಿ ಕೇರಳಕ್ಕೆ ಪ್ರಯಾಣಿಸುತ್ತಿದ್ದ ಸಂದರ್ಭ ಕೊಡಗು ಗಡಿ ಭಾಗವಾದ ಮಾಕುಟ್ಟ ಬಳಿ ವಿದ್ಯಾರ್ಥಿನಿಯ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡು ಉಸಿರಾಟದ ಸಮಸ್ಯೆಯಿಂದ ನರಳಾಡಿದ್ದಾಳೆ. ಬಸ್ಸಿನಲ್ಲಿದ್ದವರು ಆರೈಕೆ ಮಾಡಲು ಮುಂದಾದರೂ ಸುಧಾರಣೆ ಕಾಣದ ಹಿನ್ನೆಲೆ, ಚಾಲಕ ಆಸ್ಪತ್ರೆಗೆ ಬಸ್ ಚಲಾಯಿಸಿ, ಇರಿಟ್ಟಿಯ ಆಸ್ಪತ್ರೆಯೊಂದರಲ್ಲಿ ವಿದ್ಯಾರ್ಥಿನಿಯನ್ನು ದಾಖಲಿಸಿ ಚಿಕಿತ್ಸೆ ಕೊಡಿಸುವಲ್ಲಿ ಚಾಲಕ ನಾಗರಾಜ್ ಮತ್ತು ನಿರ್ವಾಹಕ ಭುವನೇಶ್ ಯಶಸ್ವಿಯಾಗಿದ್ದಾರೆ.

- Advertisement -

ಇತರ ಪ್ರಯಾಣಿಕರು ಸಹಕಾರ ನೀಡಿದ ಪರಿಣಾಮ ಸುಮಾರು 1 ಗಂಟೆಗಳ ಕಾಲ ಆಸ್ಪತ್ರೆ ಬಳಿಯೇ ಬಸ್ ನಿಲ್ಲಿಸಿ ವಿದ್ಯಾರ್ಥಿನಿ ಚೇತರಿಸಿಕೊಂಡ ನಂತರ ಅದೇ ಬಸ್ಸಿನಲ್ಲಿ ವಿದ್ಯಾರ್ಥಿನಿಯನ್ನು ತ್ರಿಶ್ಶೂರ್ ಜಿಲ್ಲೆಯ ಅಂಗಮಾಲಿ ಗ್ರಾಮಕ್ಕೆ ಬಿಟ್ಟಿದ್ದಾರೆ.

Join Whatsapp