ಜ್ಞಾನಭಾರತಿ ಕ್ಯಾಂಪಸ್‌ ನಲ್ಲಿ ಬಸ್ ಹರಿದು ಗಾಯಗೊಂಡ ವಿದ್ಯಾರ್ಥಿನಿ ಸಾವು

Prasthutha|

ಬೆಂಗಳೂರು: ಕಳೆದ ಅ.10ರಂದು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಬಿಎಂಟಿಸಿ ಬಸ್ ಹರಿದು ಗಂಭೀರವಾಗಿ ಗಾಯಗೊಂಡಿದ್ದ ಸ್ನಾತಕೋತ್ತರ ವಿದ್ಯಾರ್ಥಿನಿ ಶಿಲ್ಪಾ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ  ಕೊನೆಯುಸಿರೆಳೆದಿದ್ದಾರೆ.

- Advertisement -

ಜ್ಞಾನಭಾರತಿ ಕ್ಯಾಂಪಸ್‌ ನಲ್ಲಿ ಪ್ರಥಮ ಎಂಎಸ್ಸಿ ಗಣಿತ ಶಾಸ್ತ್ರದಲ್ಲಿ ವ್ಯಾಸಂಗ ಮಾಡುತ್ತಿದ್ದ ಕೋಲಾರದ ಕೆಜಿಎಫ್‌ ಮೂಲದ ವಿದ್ಯಾರ್ಥಿನಿ ಶಿಲ್ಪಶ್ರೀ ಆರ್‌ (22) ಹಾಗೂ ಕೆಲ ವಿದ್ಯಾರ್ಥಿನಿಯರು ಮಹಿಳಾ ವಸತಿ ನಿಲಯದ ಬಳಿ ಕಳೆದ ಅ.10ರಂದು ಬೆಳಿಗ್ಗೆ ಬಸ್ಸು ಇಳಿಯುವ ಸಂದರ್ಭದಲ್ಲಿ ಬಿಎಂಟಿಸಿ ಬಸ್ಸು ಹರಿದಿತ್ತು.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿನಿ ಶಿಲ್ಪಶ್ರೀಗೆ ಸೊಂಟದ ಕೆಳ ಭಾಗಕ್ಕೆ ತೀವ್ರವಾಗಿ ಗಾಯವಾಗಿದ್ದು, ಅವರನ್ನು ಬನ್ನೇರುಘಟ್ಟದ ಫೋರ್ಟೀಸ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಕಳೆದ 13 ದಿನಗಳಿಂದ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿನಿ ಮುಂಜಾನೆ 3ರ ವೇಳೆ ಚಿಕಿತ್ಸೆ ಫಲಿಸದೆ ಕಣ್ಣು ಮುಚ್ಚಿದ್ದಾರೆ.

- Advertisement -

ವಿದ್ಯಾರ್ಥಿನಿಗೆ ಈವರೆಗೆ ಬರೋಬ್ಬರಿ 7 ಸರ್ಜರಿ ಮಾಡಲಾಗಿದೆ. ಆದರೂ ವಿದ್ಯಾರ್ಥಿನಿ ಶಿಲ್ಪ ಬದುಕುಳಿಯಲೇ ಇಲ್ಲ. ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪೊಲೀಸರು ಈಗಾಗಲೇ ಘಟನೆ ಬಳಿಕ ಬಿಎಂಟಿಸಿ ಬಸ್‌ ಚಾಲಕ ಸುರೇಶ್‌ ಸುರೇಶ್‌ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಅಪಘಾತವನ್ನು ಖಂಡಿಸಿ‌ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಕಳೆದ ಅ.10 ರಿಂದ ವಿದ್ಯಾರ್ಥಿಗಳು‌ ಕ್ಯಾಂಪಸ್‌ ರಸ್ತೆ ಬಂದ್‌ ಮಾಡಿ ವಿದ್ಯಾರ್ಥಿಗಳು ಅಹೋರಾತ್ರಿ ಪ್ರತಿಭಟನೆ ನಡೆಸಿದ್ದರು.

ವಿದ್ಯಾರ್ಥಿನಿ ಶಿಲ್ಪಾಶ್ರೀ ಅವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ವಿದ್ಯಾರ್ಥಿನಿಯ ಕಾಲು, ಸೊಂಟದ ಮೇಲೆ ಚಕ್ರ ಹರಿದಿರುವುದರಿಂದ ಮುಂದೆ ಸಹಜ ಜೀವನ ಕಷ್ಟವಾದ್ದರಿಂದ ಆಕೆಯ ಆರೈಕೆಗಾಗಿ ಕುಟುಂಬಕ್ಕೆ ಸೂಕ್ತ ಪರಿಹಾರ ಕಲ್ಪಿಸಬೇಕು. ಜೊತೆಗೆ ಕ್ಯಾಂಪಸ್‌ ನೊಳಗೆ ಸಾರ್ವಜನಿಕ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗಿರುವುದರಿಂದ ಇಂತಹ ಅಪಘಾತಗಳು ಮರುಕಳಿಸುತ್ತಿವೆ. ವಿದ್ಯಾರ್ಥಿಗಳ ಭಯಭೀತಿಯಿಂದ ಓಡಾಡುವಂತಾಗಿದೆ. ಹಾಗಾಗಿ ಸರ್ಕಾರ ಸಾರ್ವಜನಿಕ ವಾಹನಗಳಿಗೆ ಕ್ಯಾಂಪಸ್‌ ರಸ್ತೆಯಲ್ಲಿ ಸಂಚಾರ ನಿಷೇಧಿಸಬೇಕು ಎಂದು ಒತ್ತಾಯಿಸಿದ್ದರು.

ತೆರವುಗೊಂಡಿದ್ದ ಹಂಪ್

ಪ್ರಧಾನಿ ಮೋದಿ ಅವರ ಆಗಮನಕ್ಕಾಗಿ ರಸ್ತೆ ಹಂಪ್‌ ಗಳನ್ನು ತೆರವುಗೊಳಿಸಲಾಗಿತ್ತು. ನಂತರ ಅಪಘಾತಗಳು ಹೆಚ್ಚಾಗಿದ್ದವು. ಬಿಬಿಎಂಪಿ ಸಂಪೂರ್ಣವಾಗಿ ವಿವಿಯನ್ನು ಒತ್ತುವರಿ ಮಾಡಿಕೊಂಡಿದೆ.

ಮುಖ್ಯವಾಗಿ ಇಲ್ಲಿ ವೈಜ್ಞಾನಿಕವಾಗಿ ನಿರ್ಮಿಸಿದ ರಸ್ತೆಗಳೇ ಇಲ್ಲ. ಬಿಎಂಟಿಸಿ ಬಸ್ಸು ನಮಗೆ ಅಗತ್ಯವಿದೆ. ಆದರೆ, ಸುಮಾರು 70ಕ್ಕೂ ಹೆಚ್ಚು ಖಾಸಗಿ ಬಸ್ಸುಗಳು ಜ್ಞಾನಭಾರತಿಯಲ್ಲಿ ದಿನನಿತ್ಯ ಓಡಾಡುತ್ತವೆ. ಬೈಪಾಸ್ ರಸ್ತೆಗಳಿಗಿಂತ ವಿವಿಯ ರಸ್ತೆಗಳನ್ನು ಮುಖ್ಯದಾರಿಯಾಗಿಸಿವೆ. ನಾನು ಈ ಕ್ಯಾಂಪಸ್‌ಗೆ ಬಂದಾಗಿನಿಂದ ಈ ವರ್ಷ ಸುಮಾರು 30ಕ್ಕೂ ಹೆಚ್ಚು ಅಪಘಾತಗಳಾಗಿವೆ ಎಂದು ಕ್ಯಾಂಪಸ್‌ನ ಅವ್ಯವಸ್ಥೆಗಳ ಬಗ್ಗೆ ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದರು.



Join Whatsapp