ಅತಿಥಿ ಶಿಕ್ಷಕಿ ಮೇಲೆ‌ ಹಲ್ಲೆ, ವಿದ್ಯಾರ್ಥಿ ಕೊಲೆ: ಆರೋಪಿ ಶಿಕ್ಷಕನ ಬಂಧನಕ್ಕೆ ತೀವ್ರ ಶೋಧ

Prasthutha|

ಗದಗ: ಅತಿಥಿ ಶಿಕ್ಷಕಿ ಗೀತಾ ಮೇಲಿನ ಹಲ್ಲೆ ಹಾಗೂ ಆಕೆಯ ಮಗನ ಕೊಲೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು, ಆರೋಪಿ ಮುತ್ತಪ್ಪನ ಬಂಧನಕ್ಕೆ ರಾತ್ರಿ ಇಡೀ ಶೋಧ ಕಾರ್ಯ ನಡೆಸಿದ್ದಾರೆ.

- Advertisement -

ಗಂಭೀರವಾಗಿ ಗಾಯಗೊಂಡ ಗೀತಾ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಈ ನಡುವೆ ಪ್ರಕರಣವು ತಿರುವು ಪಡೆದುಕೊಂಡಿದ್ದು, ಹಲ್ಲೆ ನಡೆಸಿದ ಅತಿಥಿ ಶಿಕ್ಷಕ ಮುತ್ತಪ್ಪ ಮತ್ತು ಗೀತಾ ಅವರ ನಡುವೆ ಅನೈತಿಕ ಸಂಬಂಧ ಹೊಂದಿದ್ದ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಹಂತಕ ಅತಿಥಿ ಶಿಕ್ಷಕ ಮುತ್ತಪ್ಪ ಮತ್ತು ಅತಿಥಿ ಶಿಕ್ಷಕಿ ಗೀತಾ ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗುತ್ತಿದ್ದು, ಶೈಕ್ಷಣಿಕ ಪ್ರವಾಸಕ್ಕೆ ಹೋದಾಗ ಶಿಕ್ಷಕ, ಶಿಕ್ಷಕಿ ನಡುವೆ ಜಗಳ ನಡೆದಿದೆ. ಹೀಗಾಗಿ ಮುತ್ತಪ್ಪನಿಂದ ಗೀತಾ ಅಂತರ ಕಾಯ್ದುಕೊಂಡಿದ್ದಳು. ಇದೇ ಕಾರಣಕ್ಕೆ ರೊಚ್ಚಿಗೆದ್ದ ಮುತ್ತಪ್ಪ ಶಾಲೆಯಲ್ಲಿ ಈ ದುಷ್ಕೃತ್ಯ ಎಸಗಿದ್ದಾನೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

- Advertisement -

ಶಿಕ್ಷಕನ ಕ್ರೂರತನಕ್ಕೆ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಯಾವ ಕಾರಣಕ್ಕೆ ಕೊಲೆ ಮಾಡಿದ್ದಾನೆ ಯಾವ ವಿಚಾರಕ್ಕೆ ಜಗಳ ಆಗಿದೆ ಅಂತ ನಮಗೆ ಗೊತ್ತಿಲ್ಲ.  ಮದುವೆಯಾಗಿ 15 ವರ್ಷವಾಗಿತ್ತು. ನನ್ನ ಮೊಮ್ಮಗನನ್ನು ಕೊಂದಿದ್ದಾನೆ ಅಂತ ಶಿಕ್ಷಕಿ ಗೀತಾ ತಾಯಿ ರತ್ನವ್ವ ಕಣ್ಣೀರು ಸುರಿಸುತ್ತಿದ್ದಾರೆ.

ತರಗತಿಯಲ್ಲಿ ಟೀಚರ್ ಭಾಗಾಕಾರ ಲೆಕ್ಕ ಮಾಡಲು ಹೇಳಿ ವಿಶ್ರಾಂತಿ ಪಡೆಯಲು ಹೋಗಿದ್ದರು. ಆಗ ಮುತ್ತಪ್ಪ ಬಂದು ನೀನು ಕಾಮಿಡಿ ಚೆನ್ನಾಗಿ ಮಾಡುತ್ತೀಯಾ ಬಾ ಅಂತ ಭರತ್ ನನ್ನು  ಕರೆದುಕೊಂಡು ಹೋಗಿದ್ದರು. ಹೋಗುವ ವೇಳೆ  ನಮ್ಮ ತರಗತಿಯ ಬಾಗಿಲು ಹಾಕಿ ಹೋಗಿದ್ದರು.  ನಂತರ ಏನಾಯ್ತು ಎಂದು ಗೊತ್ತಿಲ್ಲ, ಬಳಿಕ ಯಾರೋ ಬಂದು ನಮ್ಮ ತರಗತಿಯ ಬಾಗಿಲು ತೆರೆದರು. ಹೊರಗಡೆ ಬಂದು ನೋಡಿದಾಗ ಎಲ್ಲಾ ಕಡೆ ರಕ್ತ ಚೆಲ್ಲಿತ್ತು. ಇದು ನೋಡಿ ಎಲ್ಲರೂ ಭಯಗೊಂಡು ಓಡಿದೆವು ಎಂದು ಶಿಕ್ಷಕನ ಕ್ರೂರ ಘಟನೆ ಬಗ್ಗೆ ಪ್ರತ್ಯಕ್ಷದರ್ಶಿ ವಿದ್ಯಾರ್ಥಿ ಹೇಳಿಕೆ ನೀಡಿದ್ದಾನೆ.

ಏನಿದು ಪ್ರಕರಣ:

ನರಗುಂದ ತಾಲೂಕಿನ ಹದ್ಲಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ (ಡಿ19)  ಅತಿಥಿ ಶಿಕ್ಷಕಿ ಗೀತಾ ಮತ್ತು ಇದೇ ಶಾಲೆಯ ವಿದ್ಯಾರ್ಥಿಯೂ ಆಗಿರುವ ಗೀತಾರ ಮಗ ಭರತ್ (10) ಮೇಲೆ ಅತಿಥಿ ಶಿಕ್ಷಕ ಮುತ್ತಪ್ಪ ಸಲಾಕೆಯಿಂದ ಗಂಭೀರವಾಗಿ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದನು.

ಘಟನೆಯಲ್ಲಿ ಭರತ್ ಸಾವನ್ನಪ್ಪಿದ್ದರೆ, ಗೀತಾರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ನರಗುಂದ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.



Join Whatsapp