ಜಕಾರ್ತ: ಇಂಡೋನೇಷ್ಯಾದ ಪಶ್ಚಿಮ ಜಾವಾ ಪ್ರಾಂತ್ಯದಲ್ಲಿ ಉಂಟಾದ 5.6 ರಿಕ್ಟರ್ ತೀವ್ರತೆಯ ಭೂಕಂಪದಿಂದಾಗಿ ಸುಮಾರು 44 ಮಂದಿ ಸಾವನ್ನಪ್ಪಿ, ನೂರಾರು ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ದುರ್ಘಟನೆಯಲ್ಲಿ 44 ಜನರು ಸಾವನ್ನಪ್ಪಿದ್ದಾರೆ ಮತ್ತು 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಭೂಕಂಪದ ಕೇಂದ್ರಬಿಂದುವಾಗಿರುವ ಪಶ್ಚಿಮ ಜಾವಾ ಪಟ್ಟಣದ ಸಿಯಾಂಜೂರ್’ನ ಸರ್ಕಾರಿ ಅಧಿಕಾರಿ ಹರ್ಮನ್ ಸುಹೆರ್ಮನ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದು ಒಂದು ಆಸ್ಪತ್ರೆಯ ವರದಿಯಾಗಿದ್ದು, ಸಿಯಾಂಜೂರ್’ನಲ್ಲಿ ಇನ್ನೂ ನಾಲ್ಕು ಆಸ್ಪತ್ರೆಗಳಿವೆ. ಈ ಹಿನ್ನೆಲೆಯಲ್ಲಿ ಸಾವು ಮತ್ತು ಗಾಯಾಳುಗಳ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದರು.
ಇಂಡೋನೇಷ್ಯಾದ ರಾಜಧಾನಿ ಜಕಾರ್ತದಿಂದ ಅಗ್ನೇಯಕ್ಕೆ 75 ಕಿ.ಮೀ ದೂರದಲ್ಲಿರುವ ಸಿಯಾಂಜೂರ್’ನಲ್ಲಿ ಮತ್ತು 10 ಕಿ.ಮೀ ಆಳದಲ್ಲಿ ಈ ಭೂಕಂಪ ಉಂಟಾಗಿದೆ ಎಂದು ಹವಾಮಾನ ಮತ್ತು ಭೂಭೌತಶಾಸ್ತ್ರ ಸಂಸ್ಥೆ ತಿಳಿಸಿದೆ. ಅಲ್ಲದೆ ಈ ಪ್ರದೇಶದಲ್ಲಿ ಸುನಾಮಿಯ ಸಾಧ್ಯತೆಯಿಲ್ಲ ಎಂದು ಅದು ತನ್ನ ಅಭಿಪ್ರಾಯದಲ್ಲಿ ತಿಳಿಸಿದೆ.
ಪ್ರಥಮ ಭೂಕಂಪದ ಎರಡು ಗಂಟೆಗಳ ಬಳಿಕ ಮತ್ತೆ 25 ಭೂಕಂಪನ ದಾಖಲಿಸಲಾಗಿದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.