ವಿಧಾನ ಪರಿಷತ್ ಚುನಾವಣೆಯಲ್ಲಿ SDPIನಿಂದ ಪ್ರಬಲ ಸ್ಪರ್ಧೆ: ಶಾಫಿ ಬೆಳ್ಳಾರೆ

Prasthutha|

ಮಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಉಡುಪಿ ದಕ್ಷಿಣ ಕನ್ನಡ ದ್ವಿ ಸದಸ್ಯ ಕ್ಷೇತ್ರದಿಂದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ –ಎಸ್ ಡಿಪಿಐನಿಂದ ಸ್ಪರ್ಧಿಸಿರುವ ಶಾಫಿ ಬೆಳ್ಳಾರೆ ‘ಪ್ರಸ್ತುತ’ ಪೋರ್ಟಲ್ ಗೆ ವಿಶೇಷ ಸಂದರ್ಶನ ನೀಡಿದ್ದಾರೆ.

- Advertisement -
  1. ಗೆಲ್ಲುವಷ್ಟು ಸ್ಥಳೀಯ ಪ್ರತಿನಿಧಿಗಳ ಮತವಿಲ್ಲದಿದ್ದರೂ  ಎಸ್ ಡಿಪಿಐ ಸ್ಪರ್ಧಿಸುವ ಉದ್ದೇಶವೇನು?

ಶಾಫಿ ಬೆಳ್ಳಾರೆ : ಎಂ ಎಲ್ ಸಿ ವ್ಯವಸ್ಥೆ ದೇಶದ ಆರು ರಾಜ್ಯಗಳಲ್ಲಿ ಮಾತ್ರವಿದೆ. ಕಾನೂನು ರಚಿಸುವ ಸ್ಥಾನಗಳಲ್ಲಿ ಅವಕಾಶ ವಂಚಿತ  ಜನ ಸಮುದಾಯಗಳು, ಚಿಂತಕರು, ಸಾಹಿತಿಗಳು, ಸಾಮಾಜಿಕ ಹೋರಾಟಗಾರರು, ವಿವಿಧ  ರಂಗಗಳಲ್ಲಿ ಸೇವೆ ಸಲ್ಲಿಸಿದವರು ಎಂ ಎಲ್ ಸಿ ಗಳಾಗಿ  ಕಲ್ಯಾಣ  ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿತ್ತು. ದುರದೃಷ್ಟವಶಾತ್  ಈಗ ಬಂಡವಾಳ ಶಾಹಿಗಳು, ಶಿಕ್ಷಣ, ಆರೋಗ್ಯ ದಂಧೆ ಮಾಡುವವರು, ಬಲಿಷ್ಠ ಜಾತಿಯವರು, ಶ್ರೀಮಂತರು, ಹಣಬಲದಿಂದ  ಆಯ್ಕೆ ಯಾಗುತ್ತಿದ್ದಾರೆ. ಇದು ನಿಲ್ಲಬೇಕು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಜ್ಞಾವಂತ ಮತದಾರರು ಕಳೆದ  ಎರಡು ದಶಕಗಳಿಂದ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ನನ್ನನ್ನು ಖಂಡಿತ ಆಯ್ಕೆ ಮಾಡುತ್ತಾರೆಂದು ವಿಶ್ವಾಸವಿದೆ.

2.ಎಸ್ ಡಿ ಪಿ ಐಗೆ ಮುಸ್ಲಿಮರು ಮಾತ್ರ ಮತ ಹಾಕುತ್ತಾರಲ್ಲ?

- Advertisement -

ಶಾಫಿ ಬೆಳ್ಳಾರೆ:  ಇದು ತಪ್ಪು ಕಲ್ಪನೆ. ನಮ್ಮ ಪಕ್ಷದ  ಚುನಾವಣೆ ಪ್ರತಿನಿಧಿಗಳು,  ನಾಯಕರು, ಕಾರ್ಯಕರ್ತರು, ಮತ್ತು ಮತದಾರರಲ್ಲಿ ಗಣನೀಯ ಸಂಖ್ಯೆಯಲ್ಲಿ  ಹಿಂದೂ-ಕ್ರೈಸ್ತ  ಬಾಂಧವರು ಇದ್ದಾರೆ. ವಿಶೇಷವಾಗಿ ದಲಿತರು  ಕ್ರೈಸ್ತರು, ಮುಸ್ಲಿಮರು, ಮಹಿಳೆಯರು  ನನಗೆ ಮತ ನೀಡುವುದಾಗಿ ಆಶ್ವಾಸನೆ ಕೊಟ್ಟಿದ್ದಾರೆ.

3.ಮತದಾರರನ್ನು ಯಾವ ವಿಷಯದಲ್ಲಿ ಮನವರಿಕೆ ಮಾಡಿ ಮತ ಪಡೆಯುವಿರಿ ?

ಶಾಫಿ ಬೆಳ್ಳಾರೆ: ಗಾಂಧೀಜಿ, ಅಬ್ದುಲ್ ಕಲಾಂ, ಆಝಾದ್, ಅಂಬೇಡ್ಕರ್ ರ ಕನಸಾಗಿತ್ತು ಬಲಿಷ್ಠ  ಸ್ಥಳೀಯ ಸರಕಾರ ಮತ್ತು ಗ್ರಾಮ ಸ್ವರಾಜ್ಯ. ಅಬ್ದುಲ್ ನಝೀರ್ ಸಾಬ್ ಕರ್ನಾಟಕದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ದೇಶಕ್ಕೆ ಮಾಡಿ ತೋರಿಸಿದ್ದರು. ರಾಜೀವ್ ಗಾಂಧಿ  ಅದನ್ನು ದೇಶಕ್ಕೆ ತರಲು ಪ್ರಯತ್ನಿಸಿದ್ದರು. ಆದರೆ ಸಂಸದರು, ಶಾಸಕರು, ಮತ್ತು ರಾಜಕೀಯ ಪಕ್ಷಗಳ ಲಾಭದಿಂದ ಸ್ಥಳೀಯ ಜನ ಪ್ರತಿನಿಧಿಗಳ ಅಧಿಕಾರ  ವ್ಯಾಪ್ತಿ  ಕುಂಠಿತವಾಗಿದೆ. ಅನುದಾನ ನಿರಂತರ ಕಡಿಮೆಯಾಗುತ್ತಿದೆ. ನೆರೆ ರಾಜ್ಯಗಳಿಗೆ ಹೋಲಿಸಿದರೆ ಗ್ರಾಮ ಪಂಚಾಯತ್ ಸದಸ್ಯರು, ಕೌನ್ಸಿಲರ್ ಕಾರ್ಪೋರೇಟರ್ ಗಳ  ಗೌರವ ಧನ ತೀರ ಅತ್ಯಲ್ಪ. ಅವರು ತಾರತಮ್ಯ – ಭ್ರಷ್ಟಾಚಾರ ರಹಿತ ಕೆಲಸ ಮಾಡಬೇಕಿದ್ದರೆ ಅವರಿಗೂ ಸ್ವಾಭಿಮಾನ ಸರಳ  ಜೀವನ ನಡೆಸುವಷ್ಟು ಗೌರವ ಧನ ನೀಡಿ ಅವರ ಹೆಚ್ಚಿನ ಸಮಯಗಳನ್ನು ಅವರ ವಾರ್ಡಿನ ಜನರ ಸಮಸ್ಯೆಗಳನ್ನು ನಿವಾರಿಸಲು ಮೀಸಲಿಡಬೇಕು. ನರೇಗಾ ಯೋಜನೆ, ವೈಜ್ಞಾನಿಕ ಕಸ ವಿಲೇವಾರಿ, ಗ್ರಾಮಗಳಿಂದಲೇ  ಉದ್ಯೋಗ ಸೃಷ್ಟಿ, ತೆರಿಗೆ, ಹಣ ಸೋರಿಕೆಯಾಗದಂತೆ  ನೋಡಬೇಕು ಮೊದಲಾದ ಹಲವು ವಿಚಾರಗಳನ್ನು ಸ್ಥಳೀಯ ಪ್ರತಿನಿಧಿಗಳಿಗೆ ಮನದಟ್ಟು ಮಾಡಿದರೆ ಖಂಡಿತವಾಗಿ ಅವರು ನನಗೆ ಮತ ನೀಡುತ್ತಾರೆ ಮತ್ತು ಎಸ್ ಡಿ ಪಿ ಐ ಪಕ್ಷ ಮತದಾರರಿಗೆ ನೀಡಿದ ಭರವಸೆ ಎಂದಿಗೂ ಹುಸಿ ಮಾಡುವುದಿಲ್ಲ

4. ಅಲ್ಪಸಂಖ್ಯಾತರು  ಮತ್ತು ದಲಿತರು ಎಂ ಎಲ್ ಸಿ ಚುನಾವಣೆಯಲ್ಲಿ ಗೆಲ್ಲುವುದು ಕಡಿಮೆಯಲ್ಲವೆ ?

ಶಾಫಿ ಬೆಳ್ಳಾರೆ: ಕಳೆದ 15 ವರ್ಷಗಳಿಂದ ರಾಜ್ಯದ ಮುಸ್ಲಿಮ್, ಕ್ರೈಸ್ತ  ಮತ್ತಿತರ  ಅಲ್ಪಸಂಖ್ಯಾತರಿಗೆ ಒಬ್ಬನೇ ಒಬ್ಬ ಸಂಸದನನ್ನು ಆಯ್ಕೆ ಮಾಡಲಾಗಲಿಲ್ಲ. ಅವರ ಜನಸಂಖ್ಯೆ ಒಂದೂವರೆ  ಕೋಟಿ ತಲುಪಿಯೂ ರಾಜಕೀಯ ಪ್ರಾತಿನಿಧ್ಯ  ಸಿಕ್ಕಿಲ್ಲ. ಕೇವಲ ಏಳು ಮುಸ್ಲಿಮ್ ಎಂ ಎಲ್ ಎ ಗಳಿದ್ದರೂ ಓರ್ವ ಮಾತ್ರ ಕ್ರೈಸ್ತ ಎಂ ಎಲ್ ಎ ಇರುವುದು. ಸೆಕ್ಯುಲರ್ ಪಕ್ಷಗಳು ಅಲ್ಪಸಂಖ್ಯಾತರಿಗೆ ರಾಜಕೀಯ ಪಾಲು ಕೊಡುವುದರಲ್ಲಿ ನಿರಂತರ ವಂಚನೆ ಮಾಡುತ್ತಿವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸುಮಾರು ಎರಡು ಸಾವಿರದ ಆಸು ಪಾಸು ಮುಸ್ಲಿಂ, ಕ್ರೈಸ್ತ, ಜೈನ ಮತ್ತು ದಲಿತ ಜನ ಸಮುದಾಯಗಳ  ಎಂ ಎಲ್ ಸಿ ಮತದಾರರಿದ್ದಾರೆ. ಅಲ್ಲದೆ ರಾಜಕೀಯ ಅವಕಾಶ ವಂಚಿತ ಹಿಂದು ಧರ್ಮದ  ಹಲವು ಸಣ್ಣ ಪುಟ್ಟ ಜಾತಿಗಳ ಮತದಾರರಿದ್ದಾರೆ. ಅವರೆಲ್ಲರೂ ಒಂದಾಗಿ ಈ ಬಾರಿ ಬಲಾಢ್ಯರಿಗೆ  ಪಾಠ ಕಳಿಸಲು  ಎಸ್ ಡಿ ಪಿ ಐಯನ್ನು ಗೆಲ್ಲಿಸಲಿದ್ದಾರೆ.

5. ಬೇರೆ ಪಕ್ಷಗಳು ಬೆಂಬಲಿಸುತ್ತಿವೆಯೇ?

ಶಾಫಿ ಬೆಳ್ಳಾರೆ: ಹಿಂದಿನ  ಎಂ ಎಲ್ ಎ  ಚುನಾವಣೆಗಳಲ್ಲಿ ನಾವು ಜೆಡಿಎಸ್ –ಬಿಎಸ್ ಪಿ ಗಳೊಂದಿಗೆ ಸೀಟು ಹೊಂದಾಣಿಕೆ ಮಾಡಿದ್ದೆವು. ಇಲ್ಲಿಯೂ ಜೆಡಿಎಸ್, ಬಿ ಎಸ್ ಪಿ  ಎಡಪಕ್ಷ ಮತ್ತು ಪಕ್ಷೇತರರು ಮತದಾರರೂ ಇದ್ದಾರೆ.  ಅವರೊಂದಿಗೂ ಬೆಂಬಲ ಯಾಚಿಸುತ್ತೇವೆ.  12 ವರ್ಷಗಳ ಹಿಂದೆ ಇದೇ ಕ್ಷೇತ್ರದಿಂದ ಕೋಟ ಶ್ರೀನಿವಾಸ್ ಪೂಜಾರಿ ಬಿಜೆಪಿಯಿಂದ ಮತ್ತು ಪ್ರತಾಪ್ ಚಂದ್ರ ಶೆಟ್ಟಿ ಕಾಂಗ್ರೆಸ್ ನಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಬಾರಿಯೂ ಅವಿರೋಧ ಆಯ್ಕೆಯ ಲಕ್ಷಣಗಳು ಕಂಡು ಬಂದಿದ್ದವು. ಎಸ್ ಡಿಪಿಐ ಸ್ಪರ್ಧೆಯಿಂದ ಎಮ್ ಎಲ್ ಸಿ ಮತದಾರ ಜನಪ್ರತಿನಿಧಿಗಳಿಗೆ ತಂಬಾ ಖುಷಿಯಾಗಿದೆ. ಖುಷಿಪಟ್ಟವರಲ್ಲಿ ಎಲ್ಲಾ ಪಕ್ಷದವರು ಇದ್ದಾರೆ. ಎಮ್ ಎಲ್ ಸಿ ಚುನಾವಣೆಗೆ ಸ್ಪರ್ಧೆ ನಡೆದರೆ ಕನಿಷ್ಠ ಅವರ ವಾರ್ಡಿನ ಅಭಿವೃದ್ಧಿಯ ಬಗ್ಗೆ ಮತ್ತು ರಾಜಕೀಯ ನಾಯಕರುಗಳೊಂದಿಗೆ ಮಾತುಕತೆ  ಮತ್ತು  ಬಾರ್ಗೆನ್ ಮಾಡುವ ಅವಕಾಶ ಸಿಗುತ್ತದೆ. ಅವರ ಸಮಸ್ಯೆಗಳ ಬಗ್ಗೆ ವಿಧಾನ ಪರಿಷತ್ ನಲ್ಲಿ ಚರ್ಚಿಸಿ ಸೂಕ್ತ ಪರಿಹಾರ ಸಿಗುವ ಅವಕಾಶ ವಿದೆ. ಎಂ.ಎಲ್ ಸಿಗಳ ಲಾಭಿಗೆ ಸ್ಪಲ್ಪ ಮಟ್ಟಿಗೆ ಕಡಿವಾಣ ಹಾಕಿದಂತಾಗುತ್ತದೆ.

ಸಂದರ್ಶಕ: ಅಕ್ರಮ್ ಹಸನ್ ಉಳ್ಳಾಲ

Join Whatsapp