ಯಾವುದೇ ಸಂಘಟನೆಗಳು ಕಾನೂನು ಕೈಗೆತ್ತಿಕೊಂಡರೆ ಕಠಿಣ ಕ್ರಮ: ಮಂಗಳೂರಿನಲ್ಲಿ ಸಿಎಂ ಬೊಮ್ಮಾಯಿ ಹೇಳಿಕೆ

Prasthutha|

ಮಂಗಳೂರು: ರಾಜ್ಯದಲ್ಲಿ ಯಾವುದೇ ಧರ್ಮ ಯುದ್ಧವಿಲ್ಲ, ಸಂಘಟನೆಗಳು ಪ್ರಚೋದನಕಾರಿ ಮಾತನಾಡುವುದು ವಿಚಾರವೇ ಅಲ್ಲ. ರಾಜ್ಯದಲ್ಲಿ ಬಹಳ ಸ್ಪಷ್ಟವಾದ ನೀತಿ ಇದೆ, ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಕರ್ತವ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

- Advertisement -


ನಗರದ ಓಷಿಯನ್ ಪರ್ಲ್ ನಲ್ಲಿ ಮಾತನಾಡಿದ ಸಿಎಂ, ಯಾವುದೇ ಸಂಘಟನೆಗಳು ಕಾನೂನು ಕೈಗೆತ್ತಿಕೊಂಡರೆ ನಾವು ಕೂಡಲೇ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಕೆಲವರು ಹಿನ್ನೆಲೆಯಿಂದ ಪ್ರಚೋದನೆ ಮಾಡುವ ಕೆಲಸ ಮಾಡುತ್ತಿದ್ದು, ಈ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಗಮನಿಸಲು ಹೇಳಿದ್ದೇನೆ. ಈ ಬಗ್ಗೆ ಡಿಜಿಪಿ ನಿನ್ನೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮಾತನಾಡಿದ್ದು, ಕಾನೂನು ಸುವ್ಯವಸ್ಥೆ ಮತ್ತು ಕಾನೂನು ರಕ್ಷಣೆ ಬಗ್ಗೆ ಸೂಚನೆ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.


ಕುಮಾರಸ್ವಾಮಿ ಆರೋಪದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ, ಜನರು ತೀರ್ಮಾನಿಸುತ್ತಾರೆ. ಕುಮಾರಸ್ವಾಮಿ ಅನಿಸಿಕೆ ವಿಚಾರವಲ್ಲ, ಧಾರವಾಡ, ಶಿವಮೊಗ್ಗ, ಕೋಲಾರ ಎಲ್ಲಾ ಕಡೆ ಕ್ರಮ ಆಗಿದೆ. ಅವರ ಸರ್ಕಾರದಲ್ಲಿ ಏನು ಮಾಡಿದ್ದಾರೆ ಎಂದು ಆತ್ಮಾವಲೋಕನ ಮಾಡಲಿ ಎಂದು ತಿರುಗೇಟು ನೀಡಿದ್ದಾರೆ.

- Advertisement -


ಇಂದು ಮಂಗಳೂರಿನಲ್ಲಿ ಬಿಜೆಪಿ ವಿಭಾಗೀಯ ಸರಣಿ ಸಭೆಗಳು ನಡೆಯಲಿದ್ದು, ಜಿಲ್ಲಾವಾರು ಸಭೆಗಳು ಮತ್ತು ನಾಯಕರ ಸಭೆಗಳಿವೆ. ಮುಂದಿನ ಚುನಾವಣಾ ತಯಾರಿ ಹಿನ್ನೆಲೆಯಲ್ಲಿ ವಿಭಾಗ ಮಟ್ಟದ ಸಭೆಗಳನ್ನು ಮಾಡುತ್ತಿದ್ದು, ಎ.16 ಮತ್ತು 17 ರಾಜ್ಯ ಕಾರ್ಯಕಾರಿಣಿ ಸಭೆ ನಡೆಸಿ ಪ್ರಸ್ತಕ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದಾರೆ.



Join Whatsapp