ಮಂಗಳೂರು: ಅಂಗಡಿಯಲ್ಲಿ ಅಡಕೆ ಮಾರಾಟ ಮಾಡಿ ಹಣದೊಂದಿಗೆ ಹಿಂದಿರುಗುತ್ತಿದ್ದ ವೇಳೆ ಹಿರಿಯ ನಾಗರಿಕರೊಬ್ಬರನ್ನು ಬೈಕ್‌ನಲ್ಲಿ ಬಂದ ಅಪರಿಚಿತನೊಬ್ಬ ಪರಿಚಿತನಂತೆ ಮಾತನಾಡಿ, ಕೊರೊನಾ ಸಂದರ್ಭ ಮೋದಿ ಹಣ ಬೇಕಾದಷ್ಟು ಬಂದಿದೆ. ಅದನ್ನು ನಿಮಗೆ ಸಿಗುವ ಹಾಗೆ ಮಾಡುತ್ತೇನೆ ಎಂದು ನಂಬಿಸಿ, 7 ಸಾವಿರ ರೂ. ಪಡೆದುಕೊಂಡು ಪರಾರಿಯಾದ ಘಟನೆ ದಕ್ಷಿಣ ಕನ್ನಡದ ಉಪ್ಪಿನಂಗಡಿ ಸಮೀಪ ನಡೆದಿದೆ.
ಪದ್ಮುಂಜ ಸಮೀಪದ 65ರ ಹರೆಯದ ವೃದ್ಧರೊಬ್ಬರು ಉಪ್ಪಿನಂಗಡಿಯಲ್ಲಿ ಅಡಕೆ ಮಾರಾಟ ಮಾಡಿ ಹಿಂದಿರುಗುತ್ತಿದ್ದಾಗ, ಅವರ ಬಳಿಗೆ ಬೈಕ್‌ನಲ್ಲಿ ಬಂದ ಯುವಕನೊಬ್ಬ ತುಳುವಿನಲ್ಲಿ ಪರಿಚಯಿಸಿಕೊಂಡಿದ್ದಾನೆ. ತಾನೀಗ ಕೆನರಾ ಬ್ಯಾಂಕ್‌ನಲ್ಲಿ ಇರುವುದು. ಕೊರೊನಾ ಸಂದರ್ಭದಲ್ಲಿ ಬಂದ ಮೋದಿಯವರ ಹಣ ಬ್ಯಾಂಕ್‌ನಲ್ಲಿ ಹಾಗೆನೇ ಕೊಳೆಯುತ್ತಾ ಇದೆ. ಅದನ್ನು ಯಾರ ಅಕೌಂಟ್‌ಗೂ ಹಾಕಬಹುದು. ನಿಮ್ಮ ಪಾಸ್ ಪುಸ್ತಕ, ಆಧಾರ್ ಕಾರ್ಡ್‌ನ ಜೆರಾಕ್ಸ್ ಕಾಪಿ ಕೊಟ್ಟರೆ ಸಾಕು.
ಅದಕ್ಕಾಗಿ ನೀವು ನನಗೆ 7 ಸಾವಿರ ರೂ. ನೀಡಿದರೆ ಸಾಕು ಎಂದೆಲ್ಲ ಹೇಳಿ ಮಾತಿನಲ್ಲಿ ನಂಬಿಸಿ, ಬ್ಯಾಂಕ್ ಪಾಸ್ ಪುಸ್ತಕ ಮತ್ತು ಆಧಾರ್ ಕಾರ್ಡ್ ಜೆರಾಕ್ಸ್ ತರುವ ಮುನ್ನ ನನಗೆ 7 ಸಾವಿರ ರೂ. ನೀಡಿ ಎಂದು ಒತ್ತಾಯಿಸಿದನಂತೆ. ಆತನ ಮಾತನ್ನು ನಂಬಿದ ಆ ವೃದ್ಧ ಅಡಕೆ ಮಾರಾಟದಿಂದ ಬಂದಿರುವ ಹಣದಿಂದ 7 ಸಾವಿರ ರೂ.ವನ್ನು ಆತನ ಕೈಗಿತ್ತು, ಪಾಸ್ ಪುಸ್ತಕ ಹಾಗೂ ಆಧಾರ್ ಕಾರ್ಡ್‌ನ ಜೆರಾಕ್ಸ್ ತರಲು ಹೋದರು.
ಜೆರಾಕ್ಸ್ ಪ್ರತಿ ತರುವಾಗ ಅಪರಿಚಿತ ನಾಪತ್ತೆ
ಜೆರಾಕ್ಸ್ ಪ್ರತಿಯೊಂದಿಗೆ ಹಿಂದಿರುಗಿದಾಗ ಯುವಕ ನಾಪತ್ತೆಯಾಗಿದ್ದ. ಬಹಳಷ್ಟು ಹೊತ್ತು ಆತನಿಗಾಗಿ ಕಾದು ಕಾದು ಬಸವಳಿದಾಗ ತಾನು ಮೋಸ ಹೋಗಿರುವ ಶಂಕೆ ಮನದಲ್ಲಿ ಮೂಡಿತ್ತು. ಬಳಿಕ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪೇಟೆಯೊಳಗಿನ ಸಿಸಿ ಕ್ಯಾಮೆರಾ ಮೂಲಕ ವಂಚಕನ ಗುರುತು ಪತ್ತೆಗೆ ಶ್ರಮಿಸುತ್ತಿದ್ದಾರೆ.