ಕಮಿಷನ್ ಸರಕಾರದ ವಿರುದ್ದ ಒಂದು ವರ್ಷ ಕಾಮಗಾರಿ ನಿಲ್ಲಿಸಿ ಪ್ರತಿಭಟಿಸಿ: ಹೆಚ್.ಡಿ. ಕುಮಾರ ಸ್ವಾಮಿ

Prasthutha|

- Advertisement -

ಬೆಂಗಳೂರು: ಪರ್ಸೆಂಟೇಜ್ ಯಾಕೆ ಕೊಡುತ್ತೀರಿ? ಕಮಿಷನ್ ಕೇಳಿದರೆ ಕಾಮಗಾರಿ ಮಾಡುವುದಿಲ್ಲವೆಂದು ಒಂದು ವರ್ಷ ಕೆಲಸ ನಿಲ್ಲಿಸಿ, ಆಗ ತಂತಾನೆ ಎಲ್ಲವೂ ಸರಿ ಆಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗುತ್ತಿಗೆದಾರರಿಗೆ ಕಿವಿಮಾತು ಹೇಳಿದ್ದಾರೆ.

ಟೆಂಡರ್ ನಲ್ಲಿ ಭಾಗವಹಿಸುವುದು ಬಿಟ್ಟು ಸರಕಾರಕ್ಕೆ ಬಿಸಿ ಮುಟ್ಟಿಸಿ. ಪರ್ಸಂಟೇಜ್ ವಿರುದ್ಧ ಬೀದಿಗೆ ಇಳಿಯಿರಿ. ದಾಖಲೆಗಳನ್ನು ಜನರ ಮುಂದಿಡಿ. ಸುಖಾಸುಮ್ಮನೆ ಹೇಳಿಕೆಗಳಿಂದ ಪ್ರಯೋಜನ ಇಲ್ಲ ಎಂದು ಕುಮಾರಸ್ವಾಮಿ ಅವರು ಅಭಿಪ್ರಾಯಪಟ್ಟರು.

- Advertisement -

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು ಅವರು.

40 ಪರ್ಸೆಂಟ್ ಕಮೀಷನ್ ಬಗ್ಗೆ ಕೆಲ ಗುತ್ತಿಗೆದಾರರು ಆರೋಪ ಮಾಡಿದ್ದಾರೆ. ಯಾವುದಾದರೂ ಸಾಕ್ಷಿ ಇದ್ದರೆ ತನಿಖೆ ನಡೆಸುವುದಾಗಿ ಸರಕಾರ ಹೇಳುತ್ತಿದೆ. ತನಿಖೆಗೆ ಕೊಟ್ಟರೆ ಸಾಕ್ಷಿ ಕೊಡುತ್ತೇವೆಂದು ಗುತ್ತಿಗೆದಾರರು ಹೇಳುತ್ತಾರೆ. ಇದರಿಂದ ಪ್ರಯೋಜನ ಆಗಲ್ಲ ಎಂದರು ಅವರು.

ನಾನು ಎರಡು ಬಾರಿ ಮುಖ್ಯಮಂತ್ರಿಯಾದಾಗಲೂ ಈ ಪರ್ಸಂಟೇಜ್ ಏನೂ ಇರಲಿಲ್ಲ. ನಾನು ಲಾಟರಿ ನಿಷೇಧ ಮಾಡಿದಾಗ ಇದ್ದ ಕಿಂಗ್ ಪಿನ್ ಗಳು, ಮಂತ್ರಿಗಳು ಎಷ್ಟೆಷ್ಟು ಆಫರ್ ಕೊಟ್ಟರು ಎನ್ನುವುದು ಗೊತ್ತಿದೆ. ಆ ಆಫರ್ ಕೊಟ್ಟವರು ಇನ್ನೂ ಬದುಕಿದ್ದಾರೆ. ಆದರೂ ಎಲ್ಲವನ್ನು ಧಿಕ್ಕರಿಸಿ ಲಾಟರಿ ನಿಷೇಧ ಮಾಡಿದ್ದೆ. ಅಂತಹ ಬದ್ಧತೆ ಈ ಸರಕಾರಕ್ಕೆ ಇದೆಯಾ ಎಂದು ಹೇಳಿದರು.

ನನ್ನ ಕಾಲದಲ್ಲಿ ನಾನಂತೂ ಇದಕ್ಕೆ ಅವಕಾಶ ಕೊಡಲಿಲ್ಲ. ನಮ್ಮ ಮೆಟ್ರೋ ಯೋಜನೆಯ ಮೊದಲ ಹಂತ ಬೈಯ್ಯಪ್ಪನಹಳ್ಳಿ – ಮಹಾತ್ಮ ಗಾಂಧಿ ರಸ್ತೆ ನಡುವಿನ ಮೊದಲ ಹಂತದ ಯೋಜನೆಗೆ ಒಪ್ಪಿಗೆ ನೀಡಿದಾಗ ಅದರ ಗುತ್ತಿಗೆದಾರರು ಯಾರು ಎಂಬುದೇ ನನಗೆ ಗೊತ್ತಿರಲಿಲ್ಲ. ಆದರೆ, ಯೋಜನೆ ಕಾಲಮಿತಿಯಲ್ಲಿ ಮುಗಿಯಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದೆ. ಮುಖ್ಯಮಂತ್ರಿ ಕಚೇರಿ ಅಷ್ಟು ಪಾರದರ್ಶಕವಾಗಿತ್ತು. ಮೈತ್ರಿ ಸರಕಾರದ ಅವಧಿಯಲ್ಲಿ ಕೂಡ ಕಮಿಷನ್ ವ್ಯವಹಾರ ನಡೆದಿದೆ. ಆದರೆ ನನ್ನ ಕಚೇರಿಯಲ್ಲಿ ನಡೆದಿಲ್ಲ ಎಂದು ಕುಮಾರಸ್ವಾಮಿ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ಕೋಟ್ಯಂತರ ರೂ. ಹಣ ಮಾಡಿರುವ ಅಧಿಕಾರಿಗಳ ಮನೆಗಳ ಮೇಲೆ ದಾಳಿ ಮಾಡಿ ಎಷ್ಟು ಕಳಂಕಿತರನ್ನು ಜೈಲಿಗೆ ಕಳುಹಿಸಿದ್ದಾರೆ? ಎಷ್ಟು ಜನರಿಗೆ ನ್ಯಾಯ ಕೊಡಿಸಿದ್ದಾರೆ? ನ್ಯಾಯಾಂಗ ತನಿಖೆಯಲ್ಲಿ ಏನಾದರೂ ಸಿಕ್ಕಿತೇ? ಇಲ್ಲ, ಅರ್ಕಾವತಿ ರಿಡೂ ತನಿಖೆ ನಡೆಸಿದ ನ್ಯಾ.ಕೆಂಪಣ್ಣ ಆಯೋಗ ಮಾಡಿದ ತನಿಖೆಯಲ್ಲಿ ಏನು ಸಿಕ್ಕಿತು? ಏನೇ ಸಾಕ್ಷಿ ಕೊಟ್ಟರೂ ಯಾವುದೇ ನ್ಯಾಯ ಸಿಗುವುದಿಲ್ಲ. ಸುಮ್ಮನೆ ಗುತ್ತಿಗೆದಾರರು ಇದೆಲ್ಲವನ್ನು ಬಿಟ್ಟು ಕೆಲಸ ನಿಲ್ಲಿಸಲಿ. ಆಮೇಲೆ ಎಲ್ಲವೂ ದಾರಿಗೆ ಬರುತ್ತದೆ ಎಂದರು ಮಾಜಿ ಮುಖ್ಯಮಂತ್ರಿಗಳು.

*ಅವರಿಗೆ ಮಾನ ಮರ್ಯಾದೆ ಇದೆಯಾ?*

ಸಚಿವ ಮುನಿರತ್ನ ಅವರು ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು,

ಯಾರಿಗಿದೆ ಮಾನ, ಮರ್ಯಾದೆ? ಮಾನನಷ್ಟ ಮೊಕದ್ದಮೆ ಹೂಡುವುದಕ್ಕೆ. ಅದರ ಬಗ್ಗೆ ಚರ್ಚೆ ಬೇಡ. ಅವರು ಶಾಸಕರಾಗುವುದಕ್ಕೂ ಮೊದಲು ಗುತ್ತಿಗೆದಾರರೇ ಆಗಿದ್ದರು. ಆ ಸಂದರ್ಭದಲ್ಲಿ ಗಂಗಾನಗರದಲ್ಲಿ ಗೋಡೆ ಕುಸಿದು ಒಂದು ಮಗು ಮೃತಪಟ್ಟಿತ್ತು. ಆಗ ಇವರೇ (ಮುನಿರತ್ನ) ತಾನೇ ಗುತ್ತಿಗೆದಾರರು. ಅವರು ಏನೇನು ಮಾಡಿದ್ದಾರೆ ಅಂತ ಗೊತ್ತಿದೆ ಎಂದು ಮುನಿರತ್ನ ಬಗ್ಗೆ ಕಿಡಿಕಾರಿದರು.

*ಪ್ರಧಾನಿಗೂ ನೈತಿಕತೆ ಇಲ್ಲ*

ತನಿಖೆ, ಒತ್ತಾಯ, ಹೇಳಿಕೆ, ಪ್ರತಿಹೇಳಿಕೆ ಇವೆಲ್ಲಾ ಸಮಯ ವ್ಯರ್ಥ ಆಗುವುದಕ್ಕೆ ಅಷ್ಟೇ. ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಯಾರಿಗೂ ಕಮಿಷನ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಇದಕ್ಕೆ ಕಾಂಗ್ರೆಸ್, ಬಿಜೆಪಿ ಯಾರು ಹೊರತಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಬಂದು ಪರ್ಸಂಟೇಜ್ ವ್ಯವಹಾರವನ್ನು ಕಡಿಮೆ ಮಾಡಲಿಲ್ಲ. ಮೈತ್ರಿ ಸರಕಾರ ಇದ್ದಾಗ ಯಾರೆಲ್ಲ ಏನು ಮಾಡಿದರು ಅಂತಾನೂ ಬಿಡಿಸಿ ಹೇಳಿದರೆ ದೊಡ್ಡ ಕತೆ ಆಗುತ್ತದೆ. ಮೊದಲು ವಿಧಾನಸೌಧದಿಂದಲೆ ಸ್ವಚ್ಚ ಮಾಡಬೇಕು. ನನ್ನ ಪಕ್ಷಕ್ಕೆ ಐದು ವರ್ಷ ಸ್ವತಂತ್ರ ಸರಕಾರ ಕೊಡಿ, ಇದನ್ನು ಕಮಿಷನ್ ವ್ಯವಹಾರವನ್ನು ಬುಡ ಸಮೇತ ಕಿತ್ತು ಹಾಕುತ್ತೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಎಲ್ಲ ವಿಷಯಗಳನ್ನೂ ಪ್ರಸ್ತಾಪ ಮಾಡುತ್ತೇನೆ. ಜನರ ಪರವಾಗಿ ಎಲ್ಲ ವಿಷಯಗಳನ್ನೂ ಹೇಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿಗಳು ತಿಳಿಸಿದರು.

*ಈದ್ಗಾ ವಿವಾದ: ನ್ಯಾಯಾಲಯ ತೀರ್ಪು ಪಾಲಿಸಬೇಕು*

ಈದ್ಗಾ ಮೈದಾನದ ವಿಚಾರದಲ್ಲಿ ಹೈಕೋರ್ಟ್ ತೀರ್ಪನ್ನು ಎಲ್ಲರೂ ಪಾಲಿಸಬೇಕು. ನ್ಯಾಯಾಲಯದ ತೀರ್ಪಿಗೆ ತಲೆಬಾಗಿ, ಬೆಂಗಳೂರಿನ ಶಾಂತಿ ಕಾಪಾಡಬೇಕು ಎಂದು ಮನವಿ ಮಾಡುತ್ತೇನೆ ಎಂದ ಹೆಚ್ ಡಿಕೆ, ರಾಜ್ಯ ಬಿಜೆಪಿ ಸರಕಾರಕ್ಕೆ ಆಗಾಗ ಇಂತಹ ಘಟನೆಗಳು ಆಗುವ ಮೂಲಕ ಅವರ ಹುಳುಕುಗಳನ್ನು ಮುಚ್ಚಿಕೊಳ್ಳಲು ಅನುಕೂಲ ಆಗುತ್ತಿದೆ. ಇಂತಹ ವಿಚಾರಗಳನ್ನು ಸರಕಾರ ಲಘುವಾಗಿ ತೆಗೆದುಕೊಳ್ಳಬಾರದು ಎಂದು ಹೇಳಿದರು.

Join Whatsapp