ಜೈಪುರ: ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವ ಹಿಂದೂಗಳಿಗೆ ನೀಡುವ ಮೀಸಲಾತಿ ಪ್ರಯೋಜನಗಳನ್ನು ತಕ್ಷಣ ಹಿಂಪಡೆಯಬೇಕು ಎಂದು ವಿಶ್ವ ಹಿಂದೂ ಪರಿಷತ್ (VHP) ಬುಧವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಮತಾಂತರದ ಬಳಿಕ ಕ್ರಿಶ್ಚಿಯನ್ ಆಗಿರುವವರು ಇನ್ನು ಕೂಡ ತಮ್ಮ ಹಿಂದೂ ಹೆಸರುಗಳು ಮತ್ತು ದಾಖಲೆಗಳನ್ನು ಬಳಸುತ್ತಿದ್ದಾರೆ. ಅಲ್ಲದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ನೀಡಿದ ಮೀಸಲಾತಿಯ ಲಾಭವನ್ನು ಪಡೆಯುತ್ತಿದ್ದಾರೆ ಎಂದು VHP ರಾಷ್ಟ್ರೀಯ ವಕ್ತಾರ ವಿಜಯ್ ಶಂಕರ್ ತಿವಾರಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಈ ಕೂಡಲೇ ಎಸ್.ಸಿ ಮತ್ತು ಎಸ್.ಟಿ ಸಮುದಾಯದಿಂದ ಬಂದಿರುವ ಕ್ರಿಶ್ಚಿಯನ್ನರಿಗೆ ಮೀಸಲಾತಿ ಸೌಲಭ್ಯವನ್ನು ಸಿಗದಂತೆ ಮಾಡಲು ಯೋಜನೆ ರೂಪಿಸಿ, ಸಮೀಕ್ಷೆ ನಡೆಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಮುಂದಿನ ದಿನಗಳಲ್ಲಿ VHP ವತಿಯಿಂದ ಈ ಕುರಿತು ಜಾಗೃತಿ ಅಭಿಯಾನವನ್ನು ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.