ಹೋಂ ವರ್ಕ್ ಮಾಡಲಿಲ್ಲ ಎಂದು ಮಗನ ಹತ್ಯೆ ಮಾಡಿದ ಮಲತಂದೆ!

Prasthutha|

ಸಕಲೇಶಪುರ: ಹೋಂ ವರ್ಕ್ ಮಾಡಲಿಲ್ಲ ಎಂಬ ಕಾರಣಕ್ಕೆ ಮಲತಂದೆಯೊಬ್ಬ ಮಗನನ್ನು ಹತ್ಯೆ ಮಾಡಿರುವ ಘಟನೆ ತಾಲೂಕಿನ ದೊಡ್ಡನಾಗರ ಗ್ರಾಮದಲ್ಲಿ ನಡೆದಿದೆ.

ಸುಪ್ರೀತ್ (7) ಮೃತಪಟ್ಟ ಬಾಲಕ.

ಸುಪ್ರೀತ್ ತಾಯಿ ಆಶಾ ಎಂಬಾಕೆ 7 ವರ್ಷಗಳ ಹಿಂದೆ ಬಿಳಿಸಾರೆ ಗ್ರಾಮದ ಸತೀಶ ಎಂಬಾತನನ್ನು ಮದುವೆಯಾಗಿ 3 ವರ್ಷ ಸಂಸಾರ ಮಾಡಿದ್ದರು. ವೈವಾಹಿಕ ಸಮಸ್ಯೆಯಿಂದ ಸತೀಶನಿಂದ ವಿಚ್ಚೇದಿತಗೊಂಡ ಆಶಾ, ಉಮೇಶ ಎಂಬಾತನನ್ನು ಮದುವೆಯಾಗಿದ್ದು, ಕಳೆದ 3 ತಿಂಗಳಿಂದ ಉಮೇಶನ ಅತ್ತೆಯ ಮನೆ ದೊಡ್ಡನಾಗರ ಗ್ರಾಮದಲ್ಲಿ ಮಗನೊಂದಿಗೆ ನೆಲೆಸಿದ್ದರು.

- Advertisement -


ಆ.12 ರಂದು ಬೆಳಗ್ಗೆ ಆಶಾ ಸ್ನಾನ ಮಾಡುತ್ತಿದ್ದಾಗ ಪತಿ ಉಮೇಶ, ಸುಪ್ರೀತ್‌ಗೆ ನೀನು ಹೋಂ ವರ್ಕ್ ಮಾಡುತ್ತಿಲ್ಲ ಎಂದು ಕೂಗಾಡಿ ಹಲ್ಲೆ ಮಾಡಿ ತಳ್ಳಿ ಹಾಕಿದ್ದಾನೆ. ಸುಪ್ರೀತ್ ಜೋರಾಗಿ ಕಿರುಚಿಕೊಂಡು ನೆಲಕ್ಕೆ ಬಿದ್ದಿದ್ದು ಮೂರ್ಚೆ ಕಳೆದುಕೊಂಡಿದ್ದಾನೆ ಎನ್ನಲಾಗಿದೆ. ಪ್ರಜ್ಞೆ ತಪ್ಪಿದ್ದ ಬಾಲಕನನ್ನು ಕೂಡಲೇ ಪ್ರಾಥಮಿಕ ಚಿಕಿತ್ಸೆಗೆ ಸಕಲೇಶಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ , ಆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು.


ವೈದ್ಯರು ಪರೀಕ್ಷಿಸಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದರು. ಆ ವೇಳೆಗಾಗಲೇ ಸುಪ್ರೀತ್ ಮೃತಪಟ್ಟಿದ್ದ. ಬಾಲಕನ ತಾಯಿ ನೀಡಿದ ದೂರು ಆಧರಿಸಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.

- Advertisement -