ಪುಣೆ: ಬಿಜೆಪಿ ಆಡಳಿತದ ಪುಣೆ ಮುನ್ಸಿಪಲ್ ಕಾರ್ಪೊರೇಷನ್ 2 ಕೋಟಿ ವೆಚ್ಚದಲ್ಲಿ ಶ್ರೀರಾಮನ ಪ್ರತಿಮೆಯನ್ನು ಸ್ಥಾಪಿಸಲು ನಿರ್ಧರಿಸಿದ್ದು, NCP ತೀವ್ರ ವಿರೋಧ ವ್ಯಕ್ತಪಡಿಸಿದೆ.
ಪುಣೆ ಮುನ್ಸಿಪಲ್ ಕಾರ್ಪೊರೇಷನ್ ಸ್ಥಾಯಿ ಸಮಿತಿಯು ಪ್ರತಿಮೆ ನಿರ್ಮಿಸುವ ನಿರ್ಣಯವನ್ನು ಅಂಗೀಕರಿಸಿದೆ. ನಿರ್ಣಯವನ್ನು ಕೌನ್ಸಿಲರ್ ವರ್ಷಾ ತಾಪ್ ಕಿರಣ್ ಪರಿಚಯಿಸಿದರು. ಪ್ರತಿಮೆಗೆ 2 ಕೋಟಿ ವೆಚ್ಚವಾಗಲಿದೆ ಎಂದು ಕಾರ್ಪೋರೇಶನ್ ಅಧಿಕಾರಿಗಳು ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಹಿನ್ನೆಲೆಯಲ್ಲಿ ಪುಣೆಯಲ್ಲಿ ಪ್ರತಿಮೆಯನ್ನು ಸ್ಥಾಪಿಸಲಾಗುತ್ತಿದ್ದು, ಶ್ರೀರಾಮನ ಮೌಲ್ಯಗಳನ್ನು ಜನರಿಗೆ ತಲುಪಿಸಲು ಇದು ಸಹಾಯಕವಾಗಲಿದೆ ಎಂದು ಬಿಜೆಪಿ ತಿಳಿಸಿದೆ. ಈ ನಡುವೆ NCP ಈ ನಿರ್ಧಾರವನ್ನು ತೀವ್ರವಾಗಿ ಟೀಕಿಸಿದೆ. ಬಿಜೆಪಿ ಜನರನ್ನು ವಿಭಜಿಸಲು ಪ್ರಯತ್ನಿಸುತ್ತಿದೆ ಎಂದು ಮಾಜಿ ಮೇಯರ್ ಮತ್ತು NCP ನಾಯಕ ಪ್ರಶಾಂತ್ ಜಗದಪ್ ಆರೋಪಿಸಿದ್ದಾರೆ.
ಕೋವಿಡ್ ಸೋಂಕಿನಿಂದಾಗಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಸ್ಥಗಿತಗೊಳಿಸಿದ ಈ ಸಂದರ್ಭ ರಾಮನ ಪ್ರತಿಮೆಗೆ ಹಣವನ್ನು ಖರ್ಚು ಮಾಡುವುದು ಸರಿಯಲ್ಲ. ಕಳೆದ ನಾಲ್ಕೂವರೆ ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ನಡೆಸಿಲ್ಲ ಎಂದು ಅವರು ದೂರಿದ್ದಾರೆ.